2015 ಮಾರ್ಚ್ಗೆ ಜಮೀನಿಗೆ ನೀರು
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 16
ಈ ಭಾಗದ ರೈತರ ಜೀವನಾಡಿಯಾಗಿರುವ ಶಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯ ಮುಂಡರಗಿ ಭಾಗದ ಎಡದಂಡೆಗೆ ನವೆಂಬರ್ ಅಂತ್ಯಕ್ಕೆ 12 ಸಾವಿರ ಎಕರೆ ಪ್ರದೇಶಕ್ಕೆ ನೀರು ಬಿಡಲಾಗುವದು. 3ನೇ ಹಂತದ ಕೊಪ್ಪಳ ಭಾಗದಲ್ಲಿ 2015 ಮಾರ್ಚ್ ವೇಳೆಗೆ ರೈತರ ಜಮೀನುಗಳಿಗೆ ನೀರಾವರಿ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸೋಮವಾರ ತಾಲೂಕಿನ ಶಿಂಗಟಾಲೂರು ಏತ ನೀರಾವರಿ ಯೋಜನೆಯ ಹಮ್ಮಿಗಿ, ಶಿಂಗಟಾಲೂರು, ಬೀಡನಾಳ, ಕೊರ್ಲಹಳ್ಳಿ ಹಾಗೂ ಮೇವುಂಡಿ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯೋಜನೆ ಪೂರ್ಣ ನಂತರ ಚಾಲನೆ: ತಾವು ಈಗಾಗಲೇ ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲರ ಜತೆಗೆ ಈ ಕುರಿತು ಮಾತನಾಡಿದ್ದು, 1, 2 ಹಾಗೂ 3ನೇ ಹಂತದ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೈತರು ಈ ಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲು ಸಹಕಾರ ನೀಡುತ್ತಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಳ್ಳುವವರೆಗೂ ಚಾಲನೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂತರ್ಜಲ ಹೆಚ್ಚಳ: ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ರಾಜ್ಯದ ಹಲವು ಭಾಗಗಳಲ್ಲಿ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜಸ್ಥಾನ ಮಾದರಿಯಲ್ಲಿ ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಗದಗ ಜಿಲ್ಲೆ ಸೇರಿ ಕೊಪ್ಪಳ, ಬಿಜಾಪುರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಾಗುವುದು.
ವಿಶ್ವ ಬ್ಯಾಂಕ್ ನೆರವು: ರಾಜ್ಯದ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಲ ಸಂವರ್ಧನ ಯೋಜನೆ ಜಾರಿಗೆ ತಂದಿದೆ. ಅದರಡಿಯಲ್ಲಿ ರಾಜ್ಯದ ಸುಮಾರು 5 ಸಾವಿರ ಕೆರೆಗಳ ದುರಸ್ತಿ ಕೈಗೊಳ್ಳಲಾಗುವುದು. ಅದಕ್ಕಾಗಿ ನಬಾರ್ಡ್ ಹಾಗೂ ವಿಶ್ವ ಬ್ಯಾಂಕ್ನಿಂದ ಸುಮಾರು ರು. 3ರಿಂದ 5 ಸಾವಿರ ಕೋಟಿ ಸಾಲ ಪಡೆಯಲು ಉದ್ದೇಶಿಸಲಾಗಿದೆ.
ಜಾಲಿ ಕಂಟಿ ತೆಗೆಯಲು ಕ್ರಮ: ಡಂಬಳ ನೀರಾವರಿ ಕೆರೆ ಹೂಳು ತುಂಬಿದರೆ ಭೂ ಮತ್ತು ಗಣಿ ಇಲಾಖೆ ರೈತರ ಮೇಲೆ ಪ್ರಕರಣದ ದಾಖಲಿಸಿ ದಂಡ ಕಟ್ಟಿಸಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಡಂಬಳ ಅಷ್ಟೆ ಅಲ್ಲ ಯಾವುದೇ ನೀರಾವರಿ ಕೆರೆಯಲ್ಲಿ ರೈತರು ಮಣ್ಣು ಹೇರಿಕೊಂಡರೆ ಸಣ್ಣ ನೀರಾವರಿ ಇಲಾಖೆ ಕ್ರಮಕೈಗೊಳ್ಳುವುದಿಲ್ಲ. ಕೆರೆ ದಂಡೆ ನೂರು ಮೀಟರ್ ಬಿಟ್ಟು ಮಣ್ಣು ಪಡೆಯಬಹುದು. ಈ ಬಗ್ಗೆ ಭೂ ಇಲಾಖೆಗೆ ಸೂಚಿಸಲಾಗುವುದು ಎಂದರು. ಜಿಲ್ಲೆಯ ಎಲ್ಲ ನೀರಾವರಿ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಕಂಟಿಗಳನ್ನು ತೆಗೆಸಲು ಅಧಿಕಾರಿಗಳಿಗೆ ಆದೇಶಿಸಲಾಗುವುದು ಎಂದರು.
ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಘವೇಂದ್ರ ಹಿಟ್ನಾಳ ಹಾಗೂ ಧ್ರುವಕುಮಾರ ಹೊಸಮನಿ, ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಓದುಗಂಗಪ್ಪ ಇತರರಿದ್ದರು.