ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆ ಅಭಿವೃದ್ಧಿಗೆ ರು. 1106 ಕೋಟಿ: ಮಹದೇವಪ್ಪ

Rashmi Kasaragodu
Updated On : 18 Jun 2014, 12:35 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 17
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಧಾರವಾಡ ವೃತ್ತದ ರಸ್ತೆಗಳ ಅಭಿವೃದ್ಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿ ಒಟ್ಟು ರು. 1,106 ಕೋಟಿ ಬಿಡುಗಡೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಮಂಗಳವಾರ ಧಾರವಾಡ ವೃತ್ತದ ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ರು. 547 ಕೋಟಿ, ಸಿಆರ್‌ಎಫ್ (ಕೇಂದ್ರದಿಂದ) ಅನುದಾನದಿಂದ ರು. 197 ಕೋಟಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ ರು. 362 ಕೋಟಿ ಸೇರಿದಂತೆ ಒಟ್ಟು ರು. 1,106 ಕೋಟಿ ಬಿಡುಗಡೆಯಾಗಿದೆ. ಈ ಅನುದಾನವು ಈಗಾಗಲೇ ಇರುವ ರಸ್ತೆಗಳ ಸುಧಾರಣೆ, ಹೊಸ ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಇದಲ್ಲದೇ, ಕೇಂದ್ರದ ರು. 1 ಸಾವಿರ ಕೋಟಿ ಅನುದಾನದಲ್ಲಿ ರಾಜ್ಯದ 2 ಸಾವಿರ ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲು ಯೋಜನೆ ಹಾಕಲಾಗಿದೆ. ಈ ಪೈಕಿ ಧಾರವಾಡ ವೃತ್ತದಲ್ಲಿ ರು. 94.50 ಕೋಟಿಯಲ್ಲಿ 48 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಳೆದ ಒಂದು ವರ್ಷದಲ್ಲಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಹಣ ಬಂದಿದ್ದು, ಸದ್ಬಳಕೆ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಕುರಿತು ಆರೋಪಗಳು ಕೇಳಿ ಬಂದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದುಸಚಿವರು ಹೇಳಿದರು.
ಧಾರವಾಡ-ಸವದತ್ತಿ ರಸ್ತೆ ಕಳಪೆ ಕಾಮಗಾರಿ ಕುರಿತು ಇದೀಗ ಮಾಹಿತಿ ಬಂದಿದ್ದು, ಈ ಕುರಿತು ತನಿಖೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು. ಅಕ್ರಮ ಟೋಲ್ ಸಂಗ್ರಹ ಕುರಿತು ಮಾತನಾಡಿದ ಅವರು, ಸದ್ಯದಲ್ಲಿಯೇ ಹೊಸ ಟೋಲ್ ನೀತಿ ಜಾರಿಗೆ ಬರುತ್ತಿದ್ದು, ಈ ನೀತಿಯ ಅನ್ವಯ ಟೋಲ್ ಸಂಗ್ರಹ ಆಗಲಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ಅನ್ಯಾಯವಾಗೋದಿಲ್ಲ. ಅದೇ ರೀತಿಯ ಹೊಸ ಮರಳು ನೀತಿಯೂ ಜಾರಿಯಾಗುತ್ತಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement