ವಸಂತ ಹೊರಟ್ಟಿ ಬೆಂಬಲಿಸಿ: ಪ್ರಭುರಾಜ ಪಾಟೀಲ
ಗದಗ: ಹಿಂದಿನ ಅಭ್ಯರ್ಥಿಗಳು ಯುವ ಜನತೆ, ವಿದ್ಯಾರ್ಥಿಗಳನ್ನು ಮರೆತಿದ್ದಾರೆ. ಯುವಕರ ಧ್ವನಿಯಾಗಿ ಕೆಲಸ ಮಾಡಲು ವಸಂತ ಹೊರಟ್ಟಿಯವರನ್ನು ಆಯ್ಕೆ ಮಾಡಿ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಪ್ರಭುರಾಜಗೌಡ ಪಾಟೀಲ ವಿನಂತಿಸಿದರು. ಸೋಮವಾರ ನಗರದ ಬಸವೇಶ್ವರ ನಗರ, ಹಾತಲಗೇರಿ ನಾಕಾ, ವಿದ್ಯಾನಗರದಲ್ಲಿ ಪದವೀಧರ ಮತದಾರರಿಗೆ ಮತಯಾಚಿಸಿದರು. ವೀರೇಶ ಹೂಗಾರ, ಅಬ್ದುಲ್ ನರಸಾಪುರ ಇತರರಿದ್ದರು.
ಕಬ್ಬುಬೆಳೆಗಾರರ ಸಮಾವೇಶ ಇಂದು
ಗದಗ: ಮುಂಡರಗಿ ತಾಲೂಕಿನ ಜ. ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜೂ. 18ರ ಬೆಳಗ್ಗೆ 11ಕ್ಕೆ ವಿಜಯನಗರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ಕಬ್ಬು ಬೆಳೆಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೃಡಗಿರಿ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನ ಶ್ರೀ ಸಾನ್ನಿಧ್ಯ ವಹಿಸುವರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಸಮಾವೇಶ ಉದ್ಘಾಟಿಸುವರು. ಪ್ರಗತಿಪರ ರೈತ ವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ತೇಜಸ್ವಿ ಪಟೇಲ್, ವೀರನಗೌಡ ಪಾಟೀಲ, ಈಶ್ವರಪ್ಪ ಮಲ್ಲಶೆಟ್ಟಿ, ಪ್ರಕಾಶ ಸಜ್ಜನ ಇತರರಿರುವರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಸಿದ್ಧಲಿಂಗ ಶ್ರೀ
ನರಗುಂದ: ಮಕ್ಕಳ ಮುಂದಿನ ಭವಷ್ಯಕ್ಕಾಗಿ ಹಣ, ಬಂಗಾರ, ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನೆ ಆಸ್ತಿ ಮಾಡಬೇಕೆಂದು ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು. ಪಟ್ಟಣದ ಸಿದ್ಧೇಶ್ವರ ಪಂಚಗೃಹ ಗುಡ್ಡದ ಹಿರೇಮಠದ ಆಶ್ರಯದಲ್ಲಿ 3ನೇ ಮಾಸಿಕ ಶಿವಾನುಭವಗೋಷ್ಠಿ ಅಂಗವಾಗಿ ನಡೆದ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಯುಗಕ್ಕೆ ತಕ್ಕಂತೆ ನವ, ನವೀನ ಶಿಕ್ಷಣ ನೀಡುವುದರ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸುವಂತೆ ಪಾಲಕರು ಸಲಹೆ ಮಾಡಿದರೆ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿಯಲು ಸಾಧ್ಯವಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಠಗಳು, ಸಮಾಜ, ಸಂಘ, ಸಂಸ್ಥೆಗಳು, ಪ್ರೋತ್ಸಾಹಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿ ತೋರಬೇಕು ಎಂದರು. ವಿಜಯ ಕುಲಕರ್ಣಿ, ಡಾ. ಚಂದ್ರಶೇಖರಯ್ಯ ಹಿರೇಮಠ, ಡಾ. ಬಸವರಾಜ ಹಿರೇಮಠ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಶಿವಾನಂದ ಸಿಂದೋಗಿ, ಶ್ವೇತಾ ಚವಡಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುತ್ತಪ್ಪ ಗೊಡಿಯವರ, ಚಂದ್ರಶೇಖರ, ಮುದೆನೂರ, ಮಧುಮತಿ ಪಾಟೀಲ ಅವರನ್ನು ಶ್ರೀಮಠದಿಂದ ಸನ್ನಾನಿಸಲಾಯಿತು. ರುದ್ರನಾಥ ಕಲ್ಯಾಣಶೆಟ್ಟಿ, ಅಶೋಕ ಸಾಲೂಟಿಗಿ, ವೀರಯ್ಯಸ್ವಾಮಿ ಸೂಳಿಕೇರಿ, ರಾಜಶೇಖರ ಗಾಳಪ್ಪನವರ ಇತರರಿದ್ದರು.