ವಾಜಪೇಯಿ ವಸತಿ ಶಾಲೆಗೆ ಸ್ಥಳ ಪರಿಶೀಲನೆ
ರೋಣ: ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಬ್ಬಿಗೇರಿ ರಸ್ತೆಯಲ್ಲಿ ಗುರ್ತಿಸಲಾದ 20 ಎಕರೆ ಜಾಗೆಯ ಪರಿಶೀಲನೆಗಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ತಂಡ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ(ಎಇಇ) ಸಿಡ್ಲಬಸಪ್ಪ ನೇತೃತ್ವದಲ್ಲಿ ಮಂಗಳವಾರ ಭೇಟಿ ನೀಡಿದೆ.
ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಬ್ಬಿಗೇರಿ ರಸ್ತೆಯಲ್ಲಿ 20 ಎಕರೆ ಜಮೀನು ಗುರ್ತಿಸಲಾಗಿದೆ. ಈ ಜಾಗೆಯನ್ನು ತಂಡ ಪರಿಶೀಲಿಸಿತು.
ಎಇಇ ಸಿಡ್ಲಬಸಪ್ಪ ಮಾತನಾಡಿ, ವಸತಿ ಶಾಲಾ ಕಟ್ಟಡ, ವಿದ್ಯಾರ್ಥಿಗಳ ವಸತಿಗೃಹ, ಸಿಬ್ಬಂದಿ ವಸತಿಗೃಹ, ಆಟದ ಮೈದಾನ ನಿರ್ಮಿಸಲು 15 ಎಕರೆ ಜಾಗ ಬೇಕಾಗಿದೆ. ಇಲ್ಲಿ 20 ಎಕರೆ ಇದ್ದು, ವಸತಿ ಶಾಲೆ ನಿರ್ಮಿಸಲು ಇದು ಯೋಗ್ಯವಾದ ಸ್ಥಳ. ವಾತಾವರಣವೂ ಚೆನ್ನಾಗಿದೆ. ಈ ಕುರಿತಾಗಿ ಸಮಗ್ರ ವರದಿ ಸಿದ್ಧಪಡಿಸಿ, ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸುವುದಾಗಿ ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಶಾಂತ ವರಗಪ್ಪನವರ, ಎಸ್.ಎಸ್. ಇಟೇಕರ, ಕಿರಿಯ ಅಭಿಯಂತ ವಿಕಾಸ್, ಶಂಕರ ಇದ್ದರು.