ಸಾವಯವ ಕೃಷಿಗೆ ಆದ್ಯತೆ ನೀಡಿ
ಗದಗ: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಶೋಧನೆ, ಬದಲಾವಣೆಗಳಾಗಿದ್ದು ರೈತರು ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಫಸಲು ಇಳುವರಿ ಪಡೆಯಬಹುದಾಗಿದೆ ಎಂದು ಗದಗ ಕೃಷಿ ಅಧಿಕಾರಿ ಮಂಜುನಾಥ ಹೂಗಾರ ಹೇಳಿದರು.
ಸೋಮವಾರ ನಗರದ ಗಂಗಾಪುರಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ರೈತರಿಗೆ ಮಾಹಿತಿ ಮತ್ತು ಸಲಹೆ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಮೂಲ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳು ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಹಲವಾರು ಸಾಧನೆಗಳಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದನ್ನು ಹಾಗೂ ಒಣಬೇಸಾಯಿ ಮತ್ತು ನೀರಾವರಿ ಕೃಷಿ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ರಾಸಾಯನಿಕ ಗೊಬ್ಬರಗಿಂತ ಸಾವಯವ ಗೊಬ್ಬರದಿಂದ ಭೂಮಿ ಹದ ಕಾಯ್ದುಕೊಳ್ಳಬಹುದು. ಜತೆಗೆ ಉತ್ತಮ ಫಸಲು ಪಡೆಯಬಹುದು.
ಭೂಮಿಯನ್ನು ಹದಗೊಳಿಸಿ ಪರಿಶುದ್ಧವಾದ ಬೀಜಗಳನ್ನು ಬಿತ್ತಿ ಕೀಟಬಾಧೆ ಬಾರದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಅಡಿವೆಪ್ಪ ಪಲ್ಲೇದ ಹಾಗೂ ಎಂ.ಜಿ. ಬೆಟದೂರು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ವೀರಜೀಬಾಯಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.