ಕಾರ್ಖಾನೆ ಮಾಲೀಕರಿಂದ ರೈತರಿಗೆ ಅನ್ಯಾಯ
ಮುಂಡರಗಿ: ಸರ್ಕಾರ ಎಸ್‌ಎಪಿ ಕಾನೂನು ಜಾರಿಗೊಳಿಸಿ ರೈತರು ಬೆಳೆಯುವ ಒಂದು ಟನ್ ಕಬ್ಬಿಗೆ ರು. 2,500 ದರ ನಿಗದಿಪಡಿದರೂ ಸಕ್ಕರೆ ಕಾರ್ಖಾನೆ ಮಾಲೀಕರು ಇದುವರೆಗೂ ಹಣ ನೀಡದೇ ರಾಜ್ಯದ ಸುಮಾರು 20 ಲಕ್ಷ ಕಬ್ಬು ಬೆಳೆಗಾರ ರೈತರಿಗೆ, 50 ಲಕ್ಷ ಕಬ್ಬು ಬೆಳೆಗಾರ ಕುಟುಂಬಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಅನ್ಯಾಯವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ಹೇಳಿದರು.
ಬುಧವಾರ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಕೇಂದ್ರದಲ್ಲಿ ವಿಜಯನಗರ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಬರುವ ಕಬ್ಬು ಬೆಳೆಗಾರ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಸ್‌ಎಪಿ ಕಾಯ್ದೆಯಡಿ ರೈತರಿಗೆ ಹಣ ನೀಡುವಂತೆ ಸರ್ಕಾರ ಆದೇಶ ಮಾಡಿದರೂ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಕಬ್ಬಿನ ಹಣ ನೀಡದಿರುವುದು ವಿಷಾದಕರ ಸಂಗತಿ. ಇದಕ್ಕೆ ಮತ್ತೊಂದು ಕಾರಣ ಸರ್ಕಾರದಲ್ಲಿರುವ ಸುಮಾರು 3 ಸಚಿವರ ಮಾಲೀಕತ್ವದಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಅವರು ಅಡಚಣೆ ಉಂಟು ಮಾಡುತ್ತಿದ್ದು, ಸಿಎಂ ತಮ್ಮ ಮಾತಿಗೆ ಮನ್ನಣೆ ನೀಡದ ಸಚಿವರನ್ನು ಸಂಪುಟದಿಂದ ಕೈಬಿಡುವ ಮೂಲಕ ರೈತರ ಹಿತ ಕಾಪಾಡಬೇಕಾಗಿದೆ. ಸರ್ಕಾರ ಕಾರ್ಖಾನೆಗಳು ರೈತರಿಗೆ ನೀಡುವುದಾಗಿ ತಿಳಿಸಿ ಸರ್ಕಾರದಿಂದ ಸುಮಾರು ರು. 170 ಕೋಟಿ ಪಡೆದಿದ್ದರೂ ರೈತರಿಗೆ ಇದುವರೆಗೂ ಹಣ ನೀಡಿಲ್ಲ ಎಂದರು.
ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ತೇಜಶ್ವಿನಿ ಪಟೇಲ್, ವಿಠಲ್ ಗಣಾಚಾರಿ, ವೀರನಗೌಡ ಪಾಟೀಲ ಮಾತನಾಡಿದರು. ವೀರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಾಳಪ್ಪ ಸೊಪ್ಪಿನ, ಮಲ್ಲಿಕಾರ್ಜುನ ಹಣಜಿ, ವೀರಣಗೌಡ ಪಾಟೀಲ, ಆರ್.ಎಂ. ಸೈದರ್, ಈಶ್ವರ ಮಲ್ಲಶೆಟ್ಟಿ, ಶೇಖಪ್ಪ ಪೂಜಾರ, ಈರಣ್ಣ ಕವಲೂರ, 500ಕ್ಕೂ ಅಧಿಕ ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.