...ಈ ಸಾವು ನ್ಯಾಯವೇ?
ಕನ್ನಡಪ್ರಭ ವಾರ್ತೆ, ಗದಗ, ಜೂ. 19
ಬಾಳಿ ಬದುಕ ಬೇಕಾದ ಜೀವಗಳು, ಭವಿಷ್ಯತ್ತಿನ ಬಗ್ಗೆ ದೊಡ್ಡ ಕಲ್ಪನೆಯನ್ನು ಹೊಂದಿದ್ದ ಯುವಕರು, ಬದುಕಿನ ಮುಸ್ಸಂಜೆಯ ಹೊತ್ತಿನಲ್ಲಿ ನೆಮ್ಮದಿಯ ಜೀವನದ ಕನಸಿನಲ್ಲಿದ್ದ ವೃದ್ಧರು, ಸಂಬಂಧಿಗಳ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಗ್ರಾಮಕ್ಕೆ ಖುಷಿಯಿಂದ ಮರಳುತ್ತಿದ್ದವರು... ಜವರಾಯ ಯಾರನ್ನೂ ಬಿಡಲಿಲ್ಲ.
ಹುಲಕೋಟಿ ಬಳಿ ಯಮಸ್ವರೂಪಿ ಟಿಪ್ಪರ್ ಅಪ್ಪಳಿಸಿದ್ದೇ ತಡ, ಕ್ಷಣಾರ್ಧದಲ್ಲಿ ಹಲವು ಕನಸುಗಳು ಛಿದ್ರವಾದವು. ಬರೊಬ್ಬರಿ 12 ಜೀವಗಳನ್ನು ಬಲಿ ತೆಗೆದುಕೊಂಡ ಈ ಭೀಕರ ಅಪಘಾತ ಗುರುವಾರ ರಾತ್ರಿ ಹುಲಕೋಟಿ ಬಳಿ ವಿಧಿಯ ಅಟ್ಟಹಾಸಕ್ಕೆ ಸಾಕ್ಷಿಯಾಯಿತು.
ಟಿಪ್ಪರ್ ಚಾಲಕ ಅದ್ಯಾವ ಯಮ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದನೋ, ಕುಡಿದ ಮತ್ತಿನಲ್ಲಿದ್ದನೋ ದೇವನೇ ಬಲ್ಲ. ಆದರೆ, ಡಿಕ್ಕಿಯಾದ ರಭಸಕ್ಕೆ ಎದುರಿನಿಂದ ಬಂದ ಟ್ರ್ಯಾಕ್ಟರ್ನ ಟ್ರೇಲರ್ ಗುರುತು ಸಿಗದಂತೆ ಛಿದ್ರವಾಗಿ, ಅಷ್ಟು ದೂರಕ್ಕೆ ಕಬ್ಬಿಣದ ಮುದ್ದೆಯಂತೆ ಸಿಡಿದು ಬಿದ್ದಿದೆ. ಅದರಲ್ಲಿದ್ದವರೂ ಆಟಿಕೆಗಳಂತೆ ದೂರ ದೂರಕ್ಕೆ ಎಗರಿ ಬಿದ್ದಿದ್ದಾರೆ. ಘಟನೆ ತೀವ್ರತೆ ನೋಡಿದ ಪ್ರತಿಯೊಬ್ಬರಿಗೂ ಈ ಜೀವನ ಎಷ್ಟೊಂದು ಕ್ಷಣಿಕ ಎಂಬ ಅರಿವು ಮೂಡಿ, ಕಣ್ಣುಗಳು ತೇವಗೊಂಡವು.
ವಿಚಿತ್ರವೆಂದರೆ, ಈ ಅಪಘಾತದಲ್ಲಿ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ನವಲಗುಂದ ತಾಲೂಕಿನ ಉಮ್ಮಚಗಿಯಲ್ಲಿ ತಮ್ಮ ಬಂಧುವಿನ ಮಗಳೊಬ್ಬಳು ಋತುಮತಿಯಾಗಿದ್ದಳು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಿದ್ನೆಕೊಪ್ಪ ಗ್ರಾಮದಿಂದ ಎರಡು ಟ್ರ್ಯಾಕ್ಟರ್ಗಳಲ್ಲಿ ಜನ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೇ ಆದ್ಯತೆ. ಹೀಗಾಗಿ, ಅವರೇ ಬಹು ಸಂಖ್ಯೆಯಲ್ಲಿ ಬಂದಿದ್ದರು. ಅಲ್ಲದೆ, ಅವರೆಲ್ಲ ಟ್ರೇಲರ್ನ ಮಧ್ಯಭಾಗದಲ್ಲಿ ಕುಳಿತಿದ್ದು, ಅಪಘಾತದ ಸಂದರ್ಭದಲ್ಲಿ ಜಿಗಿದು ತಪ್ಪಿಸಿಕೊಳ್ಳಲೂ ಆಗಲಿಲ್ಲ. ಟ್ರೇಲರ್ನ ಬದಿಯಲ್ಲಿ ಕುಳಿತಿದ್ದ ಪುರುಷರು ಗಾಯಗೊಂಡಿದ್ದರೂ ಬಹುತೇಕರು ಬದುಕಿದ್ದಾರೆ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಅಪಘಾತ ಹಲವು ಮನೆಗಳ ದೀಪ ನಂದಿಸಿದೆ. ಆ ಎಲ್ಲ ಕುಟುಂಬಗಳಲ್ಲೂ ಶಾಶ್ವತವಾಗಿ ಕಣ್ಣೀರಿನ ಕಡಲಿನಲ್ಲಿ ನೂಕಿದೆ.
ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಬಂಧುಗಳ ರೋದನ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಗಾಯಾಳುಗಳ ಆಕ್ರಂದನ ಕಿವಿಗೆ ರಾಚುತ್ತಿತ್ತು. ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸುವ ಧಾವಂತ. ಎಂಟು ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿ, ನಾನೆಲ್ಲಿದ್ದೇನೆ? ನನ್ನ ತಮ್ಮ ಎಲ್ಲಿ? ನಮ್ಮ ಅವ್ವನಿಗೆ ಏನಾಗಿದೆ ಎಂದು ಕೇಳುತ್ತಲೇ ಮಾತು ನಿಲ್ಲಿಸಿ, ಕೋಮಾ ಸ್ಥಿತಿಗೆ ತಲುಪಿದಳು. ಚಿಕಿತ್ಸೆ ಕೊಡುತ್ತಿದ್ದ ವೈದ್ಯರು, ದಾದಿಯರು ಸೇರಿದಂತೆ ಎಲ್ಲರ ಕಣ್ಣುಗಳೂ ತೇವಗೊಂಡವು.
ತಮಗಾದ ತೀವ್ರ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರು ತಮ್ಮ ಮಮತೆಯ ಮಕ್ಕಳಿಗಾಗಿ ಹಂಬಲಿಸುತ್ತಾ ನನ್ನ ಮಗು ಎಲ್ಲಿದೆ, ಯಾರಿಗೆ ಏನಾಗಿದೆ, ಮೊದಲು ಅವರೆಲ್ಲರನ್ನೂ ನನಗೆ ತೋರಿಸಿ ಎಂದು ರೋದಿಸುತ್ತಿದ್ದರು. ಮೇಲೇಳಲಾಗದ ಸ್ಥತಿ. ಮಕ್ಕಳೊಂದಿಗೆ ಮಹಿಳೆಯರು ಈ ನತದೃಷ್ಟ ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ನಾಲ್ಕೈದು ಮಕ್ಕಳಿಗೂ ಗಂಭೀರ ಗಾಯಗಳಾಗಿವೆ.
ಜಿಲ್ಲಾಡಳಿತವೇ ಹಾಜರ್
ಘಟನೆ ಸುದ್ದಿ ತಿಳಿದಾಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಬಳಿ ಇರುವ ಅಪಘಾತದ ಸ್ಥಳಕ್ಕೆ ಧಾವಿಸಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು, ಆಸ್ಪತ್ರೆಗೆ ಸಾಗಿಸಲು ತ್ವರಿತವಾಗಿ ವ್ಯವಸ್ಥೆ ಮಾಡಿದರು. ಡಿಎಸ್ಪಿ ವಿಜಯ ಡಂಬಳ ಹಾಗೂ ಡಿಎಚ್ಒ ಡಾ ಡಿ.ಬಿ. ಚೆನ್ನಶೆಟ್ಟಿ ಜಿಲ್ಲಾಸ್ಪತ್ರೆಯಲ್ಲಿ ಹಾಜರಿದ್ದು, ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವಳಿ ನಗರದ ಹಲವಾರು ಖಾಸಗಿ ವೈದ್ಯರೂ ಜಿಲ್ಲಾಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ಸಹಕರಿಸಿದರು. ಒಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ನಗರದ ಖಾಸಗಿ ವೈದ್ಯರು ಮಾನವೀಯತೆಯಿಂದ ಸೇವೆಗೆ ನಿಂತಿದ್ದು ಜನರ ಪ್ರಶಂಸೆಗೆ ಪಾತ್ರವಾಯಿತು.
ಕರಾಳ ರಾತ್ರಿ...
ಗುರುವಾರ ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಪಾಲಿಗೆ ಕರಾಳ ರಾತ್ರಿಯಾಗಿ ಪರಿಣಮಿಸಿತು. ಅಪಘಾತದಲ್ಲಿ ಇಷ್ಟೊಂದು ಸಂಖ್ಯೆಯ ಬಡ ಜೀವಗಳು ಉಸಿರು ನಿಲ್ಲಿಸಿದಾಗ ಈ ಸಾವು ನ್ಯಾಯವೇ ಎಂಬ ಪ್ರಶ್ನೆ ಎಲ್ಲರ ಬಾಯಿಂದ ಅಯಾಚಿತವಾಗಿ ಬಂತು. ಅವರೆಲ್ಲರೂ ಬಡವರೇ ಆಗಿದ್ದುದರಿಂದ ಟ್ರ್ಯಾಕ್ಟರ್ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣ ಮಾಡಿದ್ದೂ ಅಪಘಾತದ ತೀವ್ರತೆ ಹೆಚ್ಚಲು ಕಾರಣವಾಯಿತು ಎಂದು ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟರು.
- ಶಿವಕುಮಾರ ಕುಷ್ಟಗಿ