ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆ ಅಪಘಾತ: 9 ಮಂದಿಗೆ ಗಾಯ

Lingaraj Badiger
Updated On : 21 Jun 2014, 11:07 am

ರೋಣ: ಟಾಟಾ ಏಸ್ (ಮ್ಯಾಜಿಕ್)ನ ಟೈರ್ ಪಂಕ್ಚರ್‌ಗೊಂಡು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ 9 ಜನರಿಗೆ ಗಾಯಗಳಾಗಿದ್ದು, ಒಬ್ಬನಿಗೆ ಗಂಭೀರ ಗಾಯಗಳಾದ ಘಟನೆ ಶುಕ್ರವಾರ ಸಂಜೆ ತಾಲೂಕಿನ ಬಾಸಲಾಪುರ ಕ್ರಾಸ್ ಮತ್ತು ಚಿಕ್ಕಮಣ್ಣೂರು ಕ್ರಾಸ್ ನಡುವೆ ಸಂಭವಿಸಿದೆ.
ಗಾಯಗೊಂಡವರನ್ನು ತಾಲೂಕಿನ ತೋಟಗಂಟಿ ಗ್ರಾಮದವರು ಎಂದು ಗುರುತಿಸಲಾಗಿದೆ. ಇವರೆಲ್ಲ ನರಗುಂದ ತಾಲೂಕಿನ ಹದ್ಲಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳಿ ಸ್ವ-ಗ್ರಾಮಕ್ಕೆ ವಾಪಾಸಾಗುತ್ತಿದ್ದರೆನ್ನಲಾಗಿದೆ. ಸುದ್ದಿ ತಿಳಿದ 108 ಆರೋಗ್ಯ ಕವಚ ವಾಹನ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಪಟ್ಟಣದ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಯಿತು. ಗಾಯಾಳುಗಳನ್ನು ಹುಚ್ಚಿರಪ್ಪ ಪೂಜಾರಿ, ನಾಗಪ್ಪ ಹಳ್ಳದಮನಿ, ಶಿವಾನಂದ ಹಳ್ಳದಮನಿ, ಶರಣಪ್ಪ ಹಳ್ಳದಮನಿ, ಈರಪ್ಪ ಪೂಜಾರಿ, ಶೇಖಪ್ಪ ಡಂಬಳ, ಬಸಪ್ಪ ಹಳ್ಳದಮನಿ, ನೀಲಪ್ಪ ಮುಂದಿನಮನಿ ಮತ್ತು ಮಲ್ಲಪ್ಪ ಪೂಜಾರ ಎಂದು ಗುರುತಿಸಲಾಗಿದೆ. ಇದರಲ್ಲಿ ಹುಚ್ಚಿರಪ್ಪ ಪೂಜಾರಿ ಎಂಬುವರ ಬಲ ಕೈ ಸಂಪೂರ್ಣ ತುಂಡಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಾಸಕ ಜಿಎಸ್ಪಿ ಭೇಟಿ: ಗಾಯಾಳುಗಳು ಚಿಕಿತ್ಸೆಗಾಗಿ ದಾಖಲಾದ ಪಟ್ಟಣದ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಜಿ.ಎಸ್. ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು. ಗಾಯಾಳುಗಳಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲು ಖಾಸಗಿ ವಾಹನದ ವ್ಯವಸ್ಥೆ ಕಲ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement