ಹಲವು ವರ್ಷಗಳ ಕನಸು ನನಸು
ಗಜೇಂದ್ರಗಡ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಬೇಕು ಎನ್ನುವ ಬಹಳ ವರ್ಷಗಳ ಕನಸು ಇಂದು ನನಸಾಗಿದೆ ಎಂದು ದಿ. ಲಕ್ಷ್ಮಿ ಅರ್ಬನ್ ಕೋ-ಆಪ್ರೇಟಿವ್ ಬ್ಯಾಂಕ್ ಚೇರ್ಮನ್ ಸಂಗನಬಸಪ್ಪ ಹಿರೇಮನಿ ಹೇಳಿದರು.
ಅವರು ಸ್ಥಳೀಯ ದಿ. ಲಕ್ಷ್ಮಿ ಅರ್ಬನ್ ಕೋ-ಆಪ್ರೇಟಿವ್ ಬ್ಯಾಂಕ್ನ ಶತಮಾನೋತ್ಸವ ಸವಿನೆನಪಿಗಾಗಿ ಈಚೆಗೆ ಬ್ಯಾಂಕ್ ಸಭಾಂಗಣದಲ್ಲಿ ಜರುಗಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕಿನ ಲಾಭದಲ್ಲಿ ಅಲ್ಪ ಮೊತ್ತವನ್ನು ತೆಗೆದು ಅದರ ಬಡ್ಡಿಯಲ್ಲಿ ಪ್ರೋತ್ಸಾಹ ಧನ ನೀಡಲಾಗಿದೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಮಕ್ಕಳಲ್ಲಿ ಪ್ರತಿಭೆ ಇದ್ದೆ ಇರುತ್ತದೆ ಎಂಬುದು ಒಂದೊಂದು ರೀತಿ ಅಡಕವಾಗಿರುತ್ತದೆ. ಅದನ್ನು ಹೊರಸೊಸುವಂತೆ ಮಾಡುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಜತೆಗೆ ಕನ್ನಡ ಭಾಷೆಯನ್ನು ಉತ್ತೇಜಿಸುವುದಕ್ಕಾಗಿ 2013-14ನೇ ಸಾಲಿನ ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ 7ನೇ, 10ನೇ ತರಗತಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದು ಪ್ರಥಮ, ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಗಿದೆ ಎಂದರು. ಉಪಾಧ್ಯಕ್ಷ ಎಸ್.ಎಸ್. ಪಟ್ಟೇದ, ಡಾ. ಬಿ.ವಿ. ಕಂಬಳ್ಯಾಳ ಮಾತನಾಡಿದರು. ಇದೇ ಸಂದರ್ಭ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಭೀಮರಾಜ ಪವಾರ, ಕವಿತಾ ಅಗ್ನೂರ, ನೇತ್ರಾ ಗೌಡರ, ಅನಿತಾ, ಅಮರೇಶ ಶರಣಪ್ಪ, ಸುಷ್ಮಾ ಸೊಬರ ಅವರನ್ನು ಸನ್ಮಾನಿಸಲಾಯಿತು.