ಕ್ಯಾನ್ಸರ್ ಪೀಡಿತರಿಗೆ ಧನಸಹಾಯ ವಿತರಣೆ
ಗಜೇಂದ್ರಗಡ: ಪಟ್ಟಣದ ಹೊರವಲಯದ ಹೊಲದಲ್ಲಿ ವಾಸಿಸುವ ಕ್ಯಾನ್ಸರ್ ಪೀಡಿತ ಅರ್ಜುನ್ ತಳವಾರ ಬಡ ಕುಟುಂಬದ ಮನೆಗೆ ಭಗವಾನ ಮಹಾವೀರ ಜೈನ್ ಆಯುರ್ವೇದಿಕೆ ಮಹಾವಿದ್ಯಾಲಯ ವೈದ್ಯರು ಭೇಟಿ ನೀಡಿ ರೋಗಿಗೆ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿ, ರೋಗಿಗೆ ಆಹಾರ ಪದಾರ್ಥ, ಬಟ್ಟೆ ಹಾಗೂ ಧನಸಹಾಯ ನೀಡಿ ಮಾನವೀಯತೆ ಮೆರದರು. ಈ ಸಂದರ್ಭ ಸಂಸ್ಥೆ ಕಾರ್ಯದರ್ಶಿ ಅಜೀತ ಬಾಗಮಾರ, ರಾಜೂರು ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ಹೂಗಾರ ಮುಂತಾದವರು ಮಾತನಾಡಿದರು. ರಾಮಚಂದ್ರ ಹುದ್ದಾರ, ಅರಿಹಂತ ಬಾಗಮಾರ, ವರ್ಧಮಾನ ಬಾಗಮಾರ, ಪಾಂಡುರಂಗ ಶಿಲವೇರಿ, ಡಾ. ಕಲ್ಮೇಶ, ಡಾ. ದಕ್ಷಾ ರಾಠೋಡ, ಡಾ. ಸಂಧ್ಯಾ, ಸಲೀಂ ಮೊಮೀನ್ ಉಪಸ್ಥಿತರಿದ್ದರು.
ಅರ್ಹತಾ ಪರೀಕ್ಷೆ ಇಂದು: ನಿಷೇಧಾಜ್ಞೆ ಜಾರಿ
ಗದಗ: ಶಿಕ್ಷಕರ ಅರ್ಹತಾ ಪರೀಕ್ಷೆಗಳು ಜೂ. 22ರಂದು ಜರುಗಲಿವೆ. ಸದರೀ ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಇತರೆ ಅವ್ಯವಹಾರ ತಡೆಗಟ್ಟಲು, ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ 15 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಜೂ. 22ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು, ಗುಂಪುಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಒಳಗಿನ ಪ್ರದೇಶದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ನಿಷೇಧಿಸಿದೆ ಹಾಗೂ ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.