ವಿಫಲವಾದ ಕೊಳವೆ ಬಾವಿ ಮುಚ್ಚಿಸಲು ಒತ್ತಾಯ
ಗದಗ: ಜಿಲ್ಲೆಯಲ್ಲಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಇರುವ ಬೋರವೆಲ್ಗಳು ನೀರು ಇಲ್ಲದೇ ವಿಫಲವಾಗಿವೆ. ಇಂತಹ ಬೋರವೆಲ್ಗಳನ್ನು ಸರ್ವೇ ಮಾಡಿಸಿ, ವ್ಯವಸ್ಥಿತ ರೀತಿಯಲ್ಲಿ ಮುಚ್ಚಿಸುವಂತಹ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ, ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಅನೇಕ ಕೊಳವೆ ಬಾವಿಗಳು ಮುಚ್ಚಳಿಕೆ ಇಲ್ಲದೇ ತೆರೆದುಕೊಂಡಿವೆ. ಅವಘಡಗಳು ಸಂಭವಿಸುವ ಮೊದಲೇ ಅವುಗಳನ್ನು ಮುಚ್ಚಿಸಲು ತಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಬಿಜಾಪುರ ಜಿಲ್ಲೆಯ ನಾಗಠಾಣ ಗ್ರಾಮದ ತೋಟವೊಂದರಲ್ಲಿ ನಡೆದ ಘಟನೆ ಗದಗ ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿದೆ. ಜಿಲ್ಲೆಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚಿಸಿ ಜನತೆ ಆತಂಕ ದೂರಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರಿಗೆ ಆಗ್ರಹಿಸಿದ್ದಾರೆ.