ವೈಚಾರಿಕತೆ ರೂಢಿಸಿಕೊಳ್ಳಿ: ಹುಲಿಕಲ್ ನಟರಾಜ್
ಗದಗ: ಮಾಟ, ಮಂತ್ರ, ಮಾಯಾಚಾರ ಎಲ್ಲವೂ ಶುದ್ಧ ಸುಳ್ಳು. ಜನತೆ ಜಾಗೃತರಾಗಬೇಕು, ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸಾಪ ಅಧ್ಯಕ್ಷ, ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದರು. ಇತ್ತೀಚೆಗೆ ನಗರದ ಗಂಗಾಪುರಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಮ್ಮೂರ ದೇವಿಯ ಜಾತ್ರೆ ಕಾರ್ಯಕ್ರಮದ ಮಾಲಿಕೆಯಲ್ಲಿ ಹಮ್ಮಿಕೊಂಡಿದ್ದ ಪವಾಡಗಳ ಅನಾವರಣ ಕಾರ್ಯಕ್ರಮದಲ್ಲಿ ಪವಾಡಗಳನ್ನು ಬಯಲುಗೊಳಿಸಿ, ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಾಧನೆಯಾಗಿದೆ. ಇಂದಿನ ದಿನಗಳಲ್ಲಿ ಪವಾಡಗಳನ್ನು ಮಾಡಿ ನಮ್ಮ ಮುಗ್ದ ಜನತೆಯನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಜನತೆಯನ್ನು ಮೋಸ ಮಾಡುವ, ಹಣ ದೋಚುವ ಕಾರ್ಯ ನಿರಂತರವಾಗಿ ನಡೆದು ಬಂದಿರುವುದು ದೊಡ್ಡ ದುರಂತವೇ ಸರಿ ಇಂತಹ ಡೋಂಗಿಗಳಿಗೆ ತಕ್ಕ ಪಾಠ ಕಲಿಸಬೇಕೆಂದರು. ನಟರಾಜ, ತಮ್ಮ ಸಂಗಡಿಗರೊಂದಿಗೆ ಹಲವಾರು ರೋಚಕ ಪವಾಡಗಳನ್ನು ಬಯಲುಗೊಳಿಸಿ, ಅದರ ಹಿಂದಿರುವ ಕೈಚಳಕದ ಮರ್ಮವನ್ನು ತೆರೆದಿಟ್ಟರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವ ಜಯಮೃತ್ಯುಂಜಯ ಶ್ರೀಗಳು, ಎಂ.ಎ. ಹಂಚಿನಾಳ, ಡಾ. ಅರ್ಜುನ ಗೊಳಸಂಗಿ, ಜಾತ್ರಾ ಸಮಿತಿಯ ಅಧ್ಯಕ್ಷ ವೀರಜಿಬಾಯಿ ಪಟೇಲ್, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಜಿ.ಪಿ. ಕಟ್ಟಿಮನಿ ಪಾಲ್ಗೊಂಡಿದ್ದರು.