ಹೈವೋಲ್ಟೇಜ್: 100ಕ್ಕೂ ಹೆಚ್ಚು ಟಿವಿಗಳಿಗೆ ಹಾನಿ
ಗದಗ: ಬೆಟಗೇರಿಯ ಗಾರ್ಗಿ ಪೇಟೆಯ ಓಣಿಯ ಭಾಗದಲ್ಲಿ ಶನಿವಾರ ಸಂಜೆ ಗಾಳಿ ಬೀಸಿದ ಪರಿಣಾಮ ಒಮ್ಮೆಲೇ ಹೈಮೊಲ್ಟೇಜ್ ವಿದ್ಯುತ್ ಬಂದ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮನೆಗಳಲ್ಲಿದ್ದ ಟಿವಿಗಳಿಗೆ ಹಾನಿ ಸಂಭವಿಸಿದೆ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಆತಂಕ ಪಡುವಂತಾಯಿತು. ಕೆಲವರು ಮನೆಗಳಲ್ಲಿನ ಟಿವಿಗಳು ಸಣ್ಣ ಪ್ರಮಾಣದ ಶಬ್ದ ಮಾಡುವುದರೊಂದಿಗೆ ಸ್ಥಗಿತಗೊಂಡರೆ ಇನ್ನು ಕೆಲವರ ಮನೆಯಲ್ಲಿನ ವಿದ್ಯುತ್ ಬಲ್ಬ್ಗಳಿಗೂ ಹಾನಿ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಮ್ಮ ಮನೆಯಲ್ಲಿ ಹಾನಿಗೊಳಗಾದ ಟಿವಿಗಳನ್ನು ರಸ್ತೆಯಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಹೆಸ್ಕಾಂ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ. ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ನಾವು ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ನಗರದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ, ಸರ್ಕಾರದಿಂದ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.