ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆ ಚೆಲ್ಲಾಟ: ಬೆಳೆ ಕಾಪಾಡಲು ಪರದಾಟ

Lingaraj Badiger
Updated On : 23 Jun 2014, 10:45 am

-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 22
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆರಾಯನ ಚೆಲ್ಲಾಟ ಮತ್ತೆ ಮುಂದುವರಿದ್ದು, ಈ ಹಿಂದೆ ಸುರಿದ ಮಳೆಯನ್ನು ಆಧರಿಸಿ ಬಿತ್ತನೆ ಮಾಡಿದ್ದ ರೈತರ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿದ್ದು, ಅದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು 5 ತಾಲೂಕುಗಳ ವ್ಯಾಪ್ತಿಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ಸದ್ಯ ತೀವ್ರ ತೇವಾಂಶದ ಕೊರತೆ ಎದುರಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಮಳೆರಾಯ ಕೃಪೆ ತೋರದೇ ಇದ್ದಲ್ಲಿ ಶೇ. 25ರಷ್ಟು ಪ್ರಮಾಣದ ಬೆಳೆ ನಷ್ಟವಾಗಲಿದ್ದು, ಇಳುವರಿಯ ಮೇಲೆ ಪರಿಣಾಮ ಬೀರದಲಿದೆ.
ತೇವಾಂಶ ಕೊರತೆ: ಜಿಲ್ಲೆಯ ಕಪ್ಪು ಮಣ್ಣಿನ ಭೂಮಿ ಹೊಂದಿರುವ ಪ್ರತಿಯೊಬ್ಬ ರೈತರು ಹೆಸರು ಬಿತ್ತುವುದು ವಾಡಿಕೆ. ಇದು 90 ದಿನದಲ್ಲಿ ಕಟಾವಿಗೆ ಬರುವುದರಿಂದ, ಬೇಗನೇ ಬೆಳೆ ಕೈಗೆ ಲಭ್ಯವಾಗುವುದು ಹಾಗೂ ಬಿತ್ತನೆ ಸೇರಿದಂತೆ ಹೆಸರು ಬೆಳೆಗೆ ಖರ್ಚೂ ಕಡಿಮೆ. ಹೀಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡುತ್ತಾರೆ. ಆದರೆ, ಹೆಸರು ಬೆಳೆಗೆ ಕಾಲಕಾಲಕ್ಕೆ ಉತ್ತಮ ರೀತಿಯಲ್ಲಿ ಮಳೆಯಾಗಬೇಕು. ಅದರಲ್ಲಿಯೂ ರೋಹಿಣಿ ಮಳೆಗೆ ಹೆಸರು ಬಿತ್ತನೆಯಾಗಬೇಕು. ಮೃಗರಶಿರಾ ಹಾಗೂ ಆರಿದ್ರ ಮಳೆ ಉತ್ತಮವಾಗಿ ಆಗಬೇಕು. ರೋಹಿಣಿ ಮಳೆ ಬಿತ್ತನೆಗೆ ಅನುಕೂಲ ಕಲ್ಪಿಸಿತ್ತು. ಆದರೆ, ಇನ್ನುಳಿದ ಮಳೆಗಳು ಆಗದೇ ಇರುವುದರಿಂದ ಬೆಳೆ ಈಗ ತೇವಾಂಶದ ಕೊರತೆ ಎದುರಿಸುತ್ತಿದೆ.
ಸಮಸ್ಯೆಗೆ ಕಾರಣ: ಜಿಲ್ಲೆಯಲ್ಲಿ 15 ದಿನಗಳಿಂದ ತೀವ್ರವಾಗಿ ಬೀಸುತ್ತಿರುವ ಒಣ ಹವೆ ರೈತರ ಬೆಳೆಗೆ ದೊಡ್ಡ ತೊಂದರೆ ಆಗಿದೆ. ಈ ಗಾಳಿಯಿಂದಾಗಿ ಭೂಮಿಯಲ್ಲಿ ಅಲ್ಪ ತೇವಾಂಶವೂ ಕಡಿಮೆಯಾಗುತ್ತಿದೆ. ಇನ್ನು ಕೆಲ ರೈತರ ಹೆಸರು ಬೆಳೆ ಈಗಷ್ಟೇ ಭೂಮಿಯಿಂದ ಮೇಲೆ ಬರುತ್ತಿದ್ದು, ಗಾಳಿಯ ರಭಸಕ್ಕೆ ಹುಟ್ಟಿದ ಬೆಳೆಯೇ ಕಿಳ್ಳುತ್ತಿದೆ. ಇದರೊಟ್ಟಿಗೆ ಜಿಲ್ಲೆಯ ರೋಣ ಮತ್ತು ಗದಗ ತಾಲೂಕಿನ ರೈತರಿಗೆ ಜಿಂಕೆಗಳ ಕಾಟವೂ ಅತಿಯಾಗಿದ್ದು, ಹೆಸರು ಬಿತ್ತನೆ ಮಾಡಿದ ರೈತರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement