ಶಿವಾನುಭವದಲ್ಲಿ ತೋಟಗಾರಿಕೆ ಬೇಸಾಯ ಉಪನ್ಯಾಸ ಇಂದು
ಗದಗ: ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಜೂ. 23ರಂದು ಸಂಜೆ 7ಕ್ಕೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆವ 2177ನೇ ಶಿವಾನುಭವದಲ್ಲಿ ವೈಜ್ಞಾನಿಕ ಪದ್ಧತಿಯ ತೋಟಗಾರಿಕೆ ಬೇಸಾಯ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ ಅವರು ಉಪನ್ಯಾಸ ನೀಡುವರು. ಪ್ರಸಾದ ಸುತಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಿರ್ಮಲಾ ಕುಂದಗೋಳ ಹಾಗೂ ಜ್ಯೋತಿ ಶಿವಪ್ಪಯ್ಯನಮಠ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಧರ್ಮಚಿಂತನ ನಡೆಯಲಿದೆ. ಶಿವಾನುಭವ ಭಕ್ತಿಸೇವೆಯನ್ನು ವಿ.ಎಲ್. ಅಂಗಡಿ ಮತ್ತು ಎಂ.ಎಸ್. ವಾಲಿ ಅವರ ಸ್ಮರಣಾರ್ಥ ಹಾಗೂ ಸ್ವಾತಿ ವಾಲಿ ಅವರು ಎಂಟೆಕ್ನಲ್ಲಿ ಚಿನ್ನದ ಪದಕ ಪಡೆದ ನಿಮಿತ್ತ ಎಸ್.ಎಂ. ವಾಲಿ ಅವರು ವಹಿಸಿಕೊಂಡಿದ್ದಾರೆ. ಸರ್ವರಿಗೂ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಪ್ರಕಟಣೆಯ ಮೂಲಕ ಸ್ವಾಗತ ಕೋರಿದ್ದಾರೆ.
ಗದಗ: ಶಿಕ್ಷಕರ ಅರ್ಹತಾ ಪರೀಕ್ಷೆ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿನ 15 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಿತು. ಬೆಳಗ್ಗೆ ನಡೆದ ಡಿಇಡಿ ಮುಗಿಸಿದ 4817 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಅವರಲ್ಲಿ 4673 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿ, 144 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಬಿಇಡಿ ಮುಗಿಸಿದ 5030 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು ಅವರಲ್ಲಿ 4830 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 200 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜೇಂದ್ರ ಪ್ರಸಾದ ತಿಳಿಸಿದ್ದಾರೆ.
ಟಿಇಟಿ ಮರು ಪರೀಕ್ಷೆಗೆ ಆಗ್ರಹ
ಗದಗ: ರಾಜ್ಯಾದ್ಯಂತ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 1ನೇ ಪ್ರಶ್ನೆ ಪತ್ರಿಕೆಯನ್ನು ವಿವಿಧೆಡೆ ಕೋಚಿಂಗ್ ಕ್ಲಾಸ್ ನಡೆಸುತ್ತಿರುವ ನಿವೃತ್ತ ಶಿಕ್ಷಕ ಶಿವಕುಮಾರ ಪ್ರಶ್ನೆ ಪತ್ರಿಕೆ ಬಹಿರಂಗಪಡಿಸಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಸಂಗತಿ ಮಾಧ್ಯಮಗಳ ಮೂಲಕ ತಿಳಿದಿದೆ. ಪ್ರಶ್ನೆ ಪತ್ರಿಕೆ ಖಜಾನೆಯಿಂದಲೇ ಪಡೆದು ರು. 1 ಲಕ್ಷಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವುದನ್ನು ಗಣೇಶಸಿಂಗ ಬ್ಯಾಳಿ ಖಂಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಫ್ಯಾಕ್ಸ್ ಮೂಲಕ ಮನವಿ ಸಲ್ಲಿಸಿರುವ ಗಣೇಶಸಿಂಗ ಬ್ಯಾಳಿ, ನಿಜವಾಗಿ ಅಭ್ಯಾಸಗೈದು ಶಿಕ್ಷಕರಾಗಬೇಕೆಂದು ಕನಸು ಕಂಡಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕಾರಣ ಕೂಡಲೇ ಮರು ಪರೀಕ್ಷೆ ನಡೆಸಬೇಕು ಹಾಗೂ ಅಪರಾಧಿ ಶಿವಕುಮಾರ ಅವರನ್ನು ಶಿಕ್ಷಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಸರ್ಕಾರ ಅನ್ಯಾಯವಾಗಿರುವ ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಬ್ಯಾಳಿ ಎಚ್ಚರಿಸಿದ್ದಾರೆ.
ಅಂಜುಮನ್ ಸಂಸ್ಥೆಗೆ ನೇಮಕ
ಗದಗ: ನಗರದ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಟ್ರಸ್ಟಿಯನ್ನಾಗಿ ನಗರದ ಹಿರಿಯ ಕರ ಸಲಹೆಗಾರ ಫರೀದ ಅಹ್ಮದ ಸುಂಕದ ಅವರನ್ನು ನೇಮಿಸಲಾಗಿದೆ ಎಂದು ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.