ಅಕ್ರಮ ಮರಳು: ಡಿಸಿಯಿಂದ ಲಾರಿ ವಶ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 23
ರೋಣ ತಾಲೂಕಾದ್ಯಂತ ಹಲವಾರು ಕಡೆ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಕಾರ್ಯಾಚರಣೆಗಿಳಿದ ಜಿಲ್ಲಾಡಳಿತ ಸಮೀಪದ ಹಿರೇ ಅಳಗುಂಡಿ ಗ್ರಾಮದ ಸುತ್ತಲಿನ ಐದು ಹಳ್ಳಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಗಳಿಗೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಅಕ್ರಮ ಮರಳು ತುಂಬಿದ ಒಂದು ಟ್ರಕ್ ವಶಪಡಿಸಿಕೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ಪ್ರಮುಖ ಹಳ್ಳಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಮರಳುಗಾರಿಕೆ ದಂಧೆ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದ್ದು, ಜತೆಗೆ ಸಾರ್ವಜನಿಕರಿಂದಲೂ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮರಳು ಮಾಫಿಯಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಕ್ರಮದಲ್ಲಿ ತೊಡಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಮೂಲಗಳು ಸ್ಪಷ್ಟಪಡಿಸಿವೆ.
ಈ ಸಂದರ್ಭ ಕೆಎ 17-4549 ಟ್ರಕ್ನಲ್ಲಿ ಮರಳು ತುಂಬಿ ಸಾಗಾಟ ಮಾಡುತ್ತಿದ್ದಂತೆ ಟ್ರಕ್ ಚಾಲಕ ಲಾರಿ ಸ್ಥಳದಲ್ಲೆ ಬಿಟ್ಟು ಪರಾರಿಯಾದ ಬಳಿಕ ಲಾರಿ ವಶಪಡಿಸಿಕೊಂಡು ಗಜೇಂದ್ರಗಡ ಪೊಲೀಸ್ ಠಾಣೆಗೆ ರವಾನಿಸಲಾಯಿತು. ಪರಾರಿಯಾದ ಚಾಲಕನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ ಎಂದರು. ಅಕ್ರಮ ಮರಳು ತುಂಬಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಎಂಎಂಆರ್ಡಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಜೇಂದ್ರಗಡ ಪಿಎಸ್ಐ ಎಚ್.ಆರ್. ನಡುಗಡ್ಡಿ ಹೇಳಿದರು.