ಚರಂಡಿ ಹೂಳು: ಗಬ್ಬೆದ್ದ ಬಡಾವಣೆ
ಶಿರಹಟ್ಟಿ: ಪಟ್ಟಣದ ಶಬ್ಬೀರ ಕಾಲನಿ ಜನತೆ ಮೂಲ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿದ್ದು, ಸುಗಮ ಸಂಚಾರಕ್ಕೆ ರಸ್ತೆ, ಚರಂಡಿ ಇಲ್ಲ. ಸೂಕ್ತ ಬೀದಿ ದೀಪದ ವ್ಯವಸ್ಥೆಯಿಲ್ಲ. ಪಟ್ಟಣ ಪಂಚಾಯಿತಿ ಕಳೆದೊಂದು ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದ ಡಾಂಬರ ರಸ್ತೆ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದ್ದರಿಂದ ಹಾಳಾಗಿವೆ. ಈ ಬಡಾವಣೆಯಲ್ಲಿ ಸಂಚಾರಕ್ಕೆ ಪಾದಚಾರಿಗಳು ತೀವ್ರ ಹರಸಾಹಸಪಡುತ್ತಿದ್ದಾರೆ.
ಈ ಬಡಾವಣೆಯಲ್ಲಿ ವಾಸಿಸುವ ಜನರ ಮನೆ ಅಕ್ಕಪಕ್ಕದಲ್ಲಿಯೇ ದೊಡ್ಡ ಪ್ರಮಾಣದ ಗಲೀಜು, ನೀರಿನ ಕೊಳಚೆ ಹೊಂಡ ನಿರ್ಮಾಣವಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ಚರಂಡಿಗಳನ್ನು ನಿರ್ಮಿಸಿದ್ದರಿಂದ ಕೊಳಚೆ ನೀರು ಹರಿದು ಹೋಗದೇ ನಿಂತಿದೆ. ಚರಂಡಿ ಸುತ್ತಲೂ ಜಾಲಿ ಕಂಠಿಗಳು ಬೆಳೆದು ದುರ್ನಾತ ಬೀರುತ್ತಿದೆ. ವಿಷ ಜಂತುಗಳ ಕಾಟ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ಜನತೆ ಸಂಚರಿಸಲು ಭಯಪಡುತ್ತಿದ್ದಾರೆ. ಬಡಾವಣೆ ಜನ ಬೀದಿಗಿಳಿದು ಸೌಲಭ್ಯಕ್ಕಾಗಿ ಪ್ರತಿಭಟಿಸುವ ಮುನ್ನ ತುರ್ತಾಗಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಶಬ್ಬೀರ ಕಾಲನಿ, ಫಕೀರೇಶ್ವರ ನಗರ, ವಿದ್ಯಾನಗರ ಇತರೆಡೆ ಪಕ್ಕಾ ರಸ್ತೆ ಹಾಗೂ ಚರಂಡಿ ನಿರ್ಮಿಸಿಲ್ಲ. ಇಲ್ಲಿ ನೂರಾರು ಹಂದಿಗಳು ವಾಸವಾಗಿದ್ದು, ವಿಪರೀತ ಗಲೀಜು ಮಾಡುತ್ತಿವೆ. ಇದರಿಂದ ನಾಗರಿಕರು ಡೆಂಘೀ, ಕಾಲರಾ ಇನ್ನಿತರ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಕೆಲ ಹಂದಿಗಳು ಸರ್ಕಾರಿ ಬಾಲಕಿಯರ ವಸತಿಗೃಹ ಹಾಗೂ ಜನವಸತಿ ಹೊಂದಿದ ಪ್ರದೇಶಗಳಲ್ಲಿರುವ ಮನೆಗಳ ಪಕ್ಕ ವಾಸವಾಗಿವೆ. ಪಟ್ಟಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕಾದ ಪಪಂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಆರೋಪ: ಮೆಗೇರಿ ಓಣಿಯ ಎಲ್ಲ ಕಡೆಗೂ ಚರಂಡಿಗಳು ಹೂಳು ತುಂಬಿವೆ. ಇದಕ್ಕೆ ಸಾರ್ವಜನಿಕರ ಸಹಕಾರದ ಕೊರತೆ ಕಾರಣವಾಗಿದೆ. ಚರಂಡಿ ಮೇಲೆ ಜನತೆ ಕಟ್ಟಿಗೆ ಹಾಕಿದ್ದು, ಪಪಂಯವರಿಗೆ ಸ್ವಚ್ಛತೆ ಕೈಗೊಳ್ಳುವುದು ತಲೆನೋವಾಗಿದೆ. ಸೋಮನಬಾವಿ ಪಕ್ಕದ ರಸ್ತೆ ಬದಿಯಲ್ಲಿ ತಿಪ್ಪೆ ಗುಂಡಿಗಳನ್ನು ಹಾಕಿದ್ದು, ಹಂದಿಗಳಿಗೆ ವಾಸಸ್ಥಳ ಮಾಡಿಕೊಟ್ಟಂತಾಗಿ ಗಲೀಜು ಕಾಣುತ್ತಿದೆ ಎಂದು ಓಣಿಯ ಯುವ ಮುಖಂಡ ರಮೇಶ ತುಳಿ ಆರೋಪಿಸುತ್ತಾರೆ.
ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ, ಕಿರಿಯ ಅಭಿಯಂತರ, ಪೌರ ಕಾರ್ಮಿಕರ, ಇತರೆ ಸಿಬ್ಬಂದಿ ಕೊರತೆಯಿಂದಾಗಿ ಆಡಳಿತ ನಡೆಸುವುದೇ ತಲೆನೋವಾಗಿದೆ. ಇದರಿಂದಾಗಿ ಪಟ್ಟಣದ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ತೀವ್ರ ತೊಂದರೆಯಾಗಿದೆ. ಅನೇಕ ಬಾರಿ ಶಾಸಕರು, ಜಿಲ್ಲಾಧಿಕಾರಿಗೆ ಸಿಬ್ಬಂದಿ ನೇಮಕ ಮಾಡಿಕೊಡುವಂತೆ ಲಿಖಿತ ಮನವಿ ಸಲ್ಲಿಸಿ 10 ತಿಂಗಳು ಗತಿಸಿದರೂ ಕ್ರಮ ಕೈಗೊಂಡಿಲ್ಲ.
- ನಾಗರಾಜ ಲಕ್ಕುಂಡಿ,
ಶಿರಹಟ್ಟಿ ಪಪಂ ಅಧ್ಯಕ್ಷ
-ಮಹದೇವಪ್ಪ ಎಂ. ಸ್ವಾಮಿ