ತೆರಿಗೆ ಹಣ ಸಿಬ್ಬಂದಿ ಪಾಲು: ಸದಸ್ಯರ ಆಕ್ರೋಶ
ಶಿರಹಟ್ಟಿ: ಸಾರ್ವಜನಿಕರು ಪಪಂಗೆ ಆಗಮಿಸಿ ತಮ್ಮ ಆಸ್ತಿ ತೆರಿಗೆ ಹಣ ತುಂಬುತ್ತಿದ್ದು, ವಸೂಲಾದ ಹಣವನ್ನು ಪಪಂ ಸಿಬ್ಬಂದಿ ಬ್ಯಾಂಕ್ ಖಾತೆಗೆ ಜಮಾ ಮಾಡದೇ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಮುಖ್ಯಾಧಿಕಾರಿಗಳು ಪಾವತಿಗೆ ಸಹಿ ಹಾಕುವಾಗ ವಸೂಲಾದ ಹಣವೆಷ್ಟು ಎಂಬುದನ್ನು ಗಮನಿಸಿ ಸರ್ಕಾರಕ್ಕೆ ಭರಿಸುವ ವ್ಯವಸ್ಥೆಗೆ ಮುಂದಾಗಬೇಕು ಎಂದು ಸದಸ್ಯ ಹುಮಾಯೂನ ಮಾಗಡಿ ಆಗ್ರಹಿಸಿದರು.
ಸೋಮವಾರ ಪಪಂ ಕಾರ್ಯಾಲಯದಲ್ಲಿ ಸಾಮಾನ್ಯ ಸಭೆ ಜರುಗಿತು.
ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಕಾರ್ಯಾಲಯಕ್ಕೆ ಬರುವುದಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ತೀವ್ರ ತೊಂದರೆಯಾಗಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ತಾಕೀತು ಮಾಡಿದರು. ಖಾಸಗಿ ಮಾಲೀಕತ್ವದ ಸ್ಥಳ ಹಾಗೂ ಅವಶ್ಯವಿಲ್ಲದ ಸ್ಥಳಗಳಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಉದ್ಯಾನವನ ನಿರ್ಮಾಣ ಮಾಡುವುದಾಗಿ ಹೇಳುತ್ತಾ ಹಣ ಲೂಟಿ ಮಾಡುತ್ತಿರುವ ಕ್ರಮ ಸರಿಯಲ್ಲ. ಸದಸ್ಯರ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕ್ಷೇತ್ರದ ವಾರ್ಡ್ನಲ್ಲಿ ತಲೆ ಎತ್ತಿ ಅಡ್ಡಾಡದಂತಾಗಿದ್ದು, ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಸದಸ್ಯ ಗೂಳಪ್ಪ ಕರಿಗಾರ ಅಸಮಾಧಾನ ವ್ಯಕ್ತಪಡಿಸಿದರು.
ಬಹುತೇಕ ಮಹಿಳಾ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಮಹಿಳಾ ಶೌಚಾಲಯ, ಚರಂಡಿ ವ್ಯವಸ್ಥೆಯಿಲ್ಲ. ಹಲವಾರು ಬಾರಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಬರೀ ಕ್ರಿಯಾ ಯೋಜನೆಯಲ್ಲಿ ಹಾಕಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ. ಸಭೆಯಲ್ಲಿ ಮೊದಲು ಮೂಲಸೌಲಭ್ಯ ಕಲ್ಪಿಸುವ ವಿಷಯವಾಗಿ ಚರ್ಚೆ ನಡೆಯಲಿ. ಅನಗತ್ಯ ಚರ್ಚೆಗೆ ಸಭೆ ಹಾಳು ಮಾಡಬೇಡಿ ಎಂದು ಆಗ್ರಹಿಸಿದರು.
ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ ತಳವಾರ, ಸದಸ್ಯ ಸಿ.ಕೆ. ಮುಳಗುಂದ, ಸದಸ್ಯ ವಿಮಲಕ್ಕ ಕಪ್ಪತ್ತನವರ, ಸಂತೋಷ ಕುರಿ, ಬುಡನಶ್ಯಾ ಮಕಾನದಾರ, ಮಹಬೂಬ ಮುಳಗುಂದ, ರೇಖಾ ಅಕ್ಕಿ, ಶಾಂತವ್ವ ಹುಲಕಡ್ಡಿ, ಸಾವಿತ್ರಿ ಬಡಿಗೇರ, ಲಲಿತಾ ಕಲ್ಲಪ್ಪನವರ, ಸುಜಾತಾ ಗೋಡೆಣ್ಣವರ ಇತರರಿದ್ದರು.
ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಯಲ್ಲಿರುವುದರಿಂದ ಲೆಕ್ಕ ಮಾಡಿಸಿ ಸ್ವತಃ ಮಾಲೀಕರೆ ಬ್ಯಾಂಕ್ಗೆ ಹೋಗಿ ಹಣ ಜಮಾ ಮಾಡಬಹುದಾಗಿದ್ದು, ಸಿಬ್ಬಂದಿ ಕೈಯಲ್ಲಿ ಹಣ ನೀಡಬಾರದು. ಆಸ್ತಿ ತೆರಿಗೆ ಹಣ ವಸೂಲು ಮಾಡುವವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಾಗಿದ್ದು, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಾಗದು ಜನರೇ ಜಾಗೃತರಾಗಬೇಕು.
- ವಿಜಯಕುಮಾರ ಸುಲಾಖೆ,
ಪಪಂ ಮುಖ್ಯಾಧಿಕಾರಿ, ಶಿರಹಟ್ಟಿ