ನಿಂಗಬಸಪ್ಪ ಪ್ಯಾಟಿ ಮುಂಡರಗಿ ತಾಪಂ ಹಂಗಾಮಿ ಅಧ್ಯಕ್ಷ
ಮುಂಡರಗಿ: ಇಲ್ಲಿನ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರದ ಅವಧಿ ಜೂ. 22ರಂದು ಕೊನೆಗೊಂಡಿದ್ದು, ಮುಂದಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗುವ ವರೆಗೂ ತಾಪಂ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿಂಗಬಸಪ್ಪ ಪ್ಯಾಟಿ ಅವರು ತಾಪಂ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಪ್ಯಾಟಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ತಾಪಂ ಅಧ್ಯಕ್ಷರಾಗಿದ್ದ ತಾರಾಬಾಯಿ ಚವ್ಹಾಣ ಹಾಗೂ ಉಪಾಧ್ಯಕ್ಷರಾಗಿದ್ದ ಅಕ್ಕಮಹಾದೇವಿ ಹಾರೋಗೇರಿ ಅವರ ಅಧಿಕಾರದ ಅವಧಿ ಜೂ. 22ರಂದು ಮುಕ್ತಾಯಗೊಂಡಿದೆ. ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 140 ಪ್ರಕರಣದ 6ನೇ ಉಪಪ್ರಕರಣದ ಅಡಿಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ನಿಂಗಬಸಪ್ಪ ಪ್ಯಾಟಿ ಅಧಿಕಾರ ಪಡೆದುಕೊಂಡರು. ಅಧಿಕಾರ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಪಂ ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಸಹಕಾರ ಹಾಗೂ ಸಲಹೆಗಳೊಂದಿಗೆ ಉತ್ತಮ ಆಡಳಿತ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಸದಸ್ಯೆ ಹೇಮಾವತಿ ನಾಯಕ, ಜಗದೀಶ ಹಾರೋಗೇರಿ, ಬಸವರಾಜ ಸಂಗನಾಳ, ಶೇಖರಯ್ಯ ಗುರುವೀನ, ಬಸವರಾಜ ಪುರದ ಇತರರು ಅಭಿನಂದಿಸಿದರು.