ವಿದ್ಯುತ್ ಪೂರೈಕೆ ತಾರತಮ್ಯ: ಪ್ರತಿಭಟನೆ
ಶಿರಹಟ್ಟಿ: ಹೆಸ್ಕಾಂ 4-5 ತಿಂಗಳಿಂದ ರೈತರ ನೀರಾವರಿ ಜಮೀನುಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಮಾಗಡಿ ಗ್ರಾಮ ವ್ಯಾಪ್ತಿಯ ಅಕ್ಕಿಗುಂದ ಗ್ರಾಮ ರಸ್ತೆಯಲ್ಲಿರುವ ಮುಳ್ಳೂರು ಹೊಲದಲ್ಲಿನ ವಿದ್ಯುತ್ ಪರಿವರ್ತಕಕ್ಕೆ ಕಳಪೆ ಮಟ್ಟದ ಸಾಮಗ್ರಿ ಅಳವಡಿಸಿದ್ದರಿಂದ ಪದೇ ಪದೇ ಸುಡುತ್ತಿದ್ದು, ನೀರಾವರಿ ಬೆಳೆಗಳು ಒಣಗುತ್ತಿವೆ. ಕೂಡಲೇ ಹೊಸ ಟಿಸಿ ಅಳವಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಮಾಗಡಿ ಗ್ರಾಮದ ರೈತರು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಭಾರಿ ಶಾಖಾಧಿಕಾರಿ ಎಂ.ಜಿ. ವರವಿ ಅವರಿಗೆ ಮನವಿ ಸಲ್ಲಿಸಿದರು.
ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ರಮೇಶ ಕೋಳಿವಾಡ, ವೇದಿಕೆ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ರುದ್ರಪ್ಪ ಕೆಂಚಕ್ಕನವರ ಮಾತನಾಡಿ, 15 ದಿನಗಳ ಹಿಂದೆಯೇ ವಿದ್ಯುತ್ ಪರಿವರ್ತಕ ಸುಟ್ಟಿದ್ದು, ರೈತರ ನೀರಾವರಿ ಜಮೀನುಗಳಿಗೆ ನೀರು ಪೂರೈಕೆಯಲ್ಲಿ ತೀವ್ರ ತೊಂದರೆಯಾಗಿದ್ದು, ಬಿಟಿ ಹತ್ತಿ, ಈರುಳ್ಳಿ, ಶೇಂಗಾ ಬೆಳೆಗಳು ಒಣಗಲಾರಂಭಿಸಿದ್ದು, ರೈತರು ತೀವ್ರ ನಷ್ಟಕ್ಕೆ ಸಿಲುಕುವಂತಾಗಿದೆ. ಇದಕ್ಕೆ ಹೆಸ್ಕಾಂ ಕಾರ್ಯವೈಖರಿಯೇ ಕಾರಣ ಎಂದು ಆರೋಪಿಸಿದರು.
ಹಲವಾರು ಬಾರಿ ಸ್ವಂತ ಹಣದಿಂದಲೇ ರೈತರೆಲ್ಲ ಸೇರಿ ವಿದ್ಯುತ್ ಪರಿವರ್ತಕ ರಿಪೇರಿ ಮಾಡಿಸಿದ್ದೇವೆ. ಹೊಸ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವಂತೆ ಇಲಾಖೆಗೆ ಮನವಿ ಮಾಡಿಕೊಳ್ಳಲು ಹೋದ ರೈತರಿಂದ ಅಧಿಕಾರಿಗಳು ರು. 7,500, 4,500 ಹಣ ಪಡೆದಿದ್ದು, ಇನ್ನು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ಬಳಿಕ ಸ್ಥಳಕ್ಕಾಗಮಿಸಿದ ಶಾಖಾಧಿಕಾರಿ ಎಂ.ಜಿ. ವರವಿ ಮನವಿ ಸ್ವೀಕರಿಸಿ ಮಾತನಾಡಿ, ರೈತರ ನೀರಾವರಿ ಬೆಳೆಗಳಿಗೆ ತೊಂದರೆಯಾಗದ ಹಾಗೆ ತುರ್ತಾಗಿ ಮೇಲಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಲ್ಲಪ್ಪ ರೋಣದ, ಬಸವರಡ್ಡಿ ಮುಳ್ಳೂರ, ಪರಶುರಾಮ ಡೋಣಿ, ವಿಷ್ಣು ಬಾಲರಡ್ಡಿ, ಸದಾನಂದಪ್ಪ ಹೂಗಾರ, ನಾರಾಯಣ ಯರಗಟ್ಟಿ, ಪಿ.ಎಸ್. ಹೂಗಾರ, ತಿಪ್ಪಣ್ಣ ಗಿಡಕಾವ, ಎಫ್.ಎಸ್. ಕುರಿ, ರಮೇಶ ಮಾಯಣ್ಣವರ ರೈತರು ಇದ್ದರು.