ಬಂಡಾಯದ ನಾಡು ತ್ಯಾಜ್ಯಮಯ
ನರಗುಂದ: ಬಂಡಾಯದ ನಾಡು ಎಂದು ಪ್ರಖ್ಯಾತಿ ಪಡೆದಿದ್ದ ನರಗುಂದ ಪಟ್ಟಣವೀಗ ಪುರಸಭೆ ನಿರ್ಲಕ್ಷ್ಯದಿಂದಾಗಿ ಪಟ್ಟಣದಾದ್ಯಂತ ಎಲ್ಲಂದರಲ್ಲಿ ಕಸ ತುಂಬಿ ದುರ್ನಾತ ಬೀರುವ ಮೂಲಕ ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿದೆ. ಹುಬ್ಬಳ್ಳಿಯ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗುಜಮಾಗಡಿ ಪೆಟ್ರೋಲ್ ಬಂಕ್ನ ಪಕ್ಕದ ಚರಂಡಿ ಸ್ವಚ್ಚತೆ ಮತ್ತು ಕಸವಿಲೇವಾರಿಗೊಳಸದೇ ಇರುವುದರಿಂದ ಪ್ರತಿದಿನ ಇಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ತುಂಬಿರುವ ಚರಂಡಿಗಳು: ಪಟ್ಟಣದ 23 ವಾರ್ಡ್ಗಳ ಚರಂಡಿಯನ್ನು ಪುರಸಭೆಯವರು ಸರಿಯಾಗಿ ಸ್ವಚ್ಛಗೊಳಿಸದಿರುವುದರಿಂದ ಪಟ್ಟಣದಲ್ಲಿನ ಚರಂಡಿಯಲ್ಲಿ ಹೂಳು ತುಂಬಿ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಕೆಸಿಸಿ ಬ್ಯಾಂಕ್ ಹಾಗೂ ಪಿಎಲ್ಡಿ ಬ್ಯಾಂಕ್, ಸಂತೆ ಮಾರುಕಟ್ಟೆ, ಎಸ್ಬಿಐ ಮುಖ್ಯ ಬ್ರಾಂಚ್, ಉರ್ದು ಶಾಲೆ, ಬಸವೇಶ್ವರ ವೃತ್ತ, ಸರ್ವಜ್ಞ ವೃತ್ತ, ಸೋಮಾಪುರದ ಮಾರುತಿ ದೇವಸ್ಥಾನ, ಡಾ. ಅಂಬೇಡ್ಕರ್ ನಗರ, ಬೆಣ್ಣೆ ಬಜಾರ, ಪೊಲೀಸ್ ಠಾಣೆ, ಹಳೆ ತಹಸೀಲ್ದಾರ್ ಕಾರ್ಯಾಲಯ, ಆರೋಗ್ಯ ಇಲಾಖೆ ಸೇರಿದಂತೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿರುವ ಚರಂಡಿಗಳನ್ನು ಸ್ಚಚ್ಛತೆಗೊಳಿಸುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಪುರಸಭೆ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಸಮಸ್ಯೆಗಳಿರುವ ವಾರ್ಡ್ಗಳತ್ತ ಮುಖ ಮಾಡಿ ನೋಡುತ್ತಿಲ್ಲ.
ಕಂಟೇನರ್ಗಳಿಂದ ದುರ್ವಾಸನೆ: ಪಟ್ಟಣದ 23 ವಾರ್ಡ್ಗಳಲ್ಲಿಯೂ ಕಸ ಹಾಕಲು ಪುರಸಭೆಯಿಂದ ತ್ಯಾಜ್ಯ ವಿಲೇವಾರಿ ಕಂಟೇನರ್ಗಳನ್ನು ಇಡಲಾಗಿದೆ. ಇವುಗಳಲ್ಲಿ ಪಟ್ಟಣದ ಬೆಣ್ಣೆ ಬಜಾರ, ಶಿವಾಜಿ ವೃತ್ತ, ಗಾಡಿ ಓಣಿ, ಹೊಸಕೇರಿ ಬಸವೇಶ್ವರ ದೇವಸ್ಥಾನ, ಅಧ್ಯಾಪಕ ನಗರ, ಬಸ್ ನಿಲ್ದಾಣಗಳಲ್ಲಿರುವ ಕಂಟೇನರ್ಗಳಲ್ಲಿನ ಕಸವನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡದಿರುವುದರಿಂದ ಹಂದಿ, ನಾಯಿಗಳು ಈ ಕಂಟೇನರ್ನಲ್ಲಿರುವ ಕಸ ಹೊರ ಹಾಕಿ ಕಂಟೇನರ್ ಸುತ್ತಲೂ ಗಲೀಜು ಸಂಗ್ರಹವಾಗಿ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರಿಗೆ ಇದರಿಂದಾಗಿ ನಿತ್ಯ ಕಿರಿಕಿರಿಯುಂಟಾಗುತ್ತಿದೆ.
ಕಸ ವಿಲೇವಾರಿಯಲ್ಲಿ ವಿಳಂಬವೇಕೆ?: ಪಟ್ಟಣದ ಎಲ್ಲ 23 ವಾರ್ಡ್ಗಳ ಚರಂಡಿ, ಕಂಟೇನರ್ಗಳಲ್ಲಿನ ಕಸವನ್ನು 2-3 ದಿನಕ್ಕೊಮ್ಮೆ ವಿಲೇವಾರಿ ಮಾಡಬೇಕು. ಆದರೆ, ನರಗುಂದ ಪುರಸಭೆಯವರು 8-10 ದಿನ ಕಳೆದರೂ ವಿಲೇವಾರಿ ಮಾಡದಿರುವುದು ನಿವಾಸಿಗಳು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕಸ ವಿಲೇವಾರಿಗೊಳಿಸದಿರುವುದರಿಂದ ಕಂಟೇನರ್ಗಳು ಸಂಪೂರ್ಣ ಭರ್ತಿಯಾಗಿ ಬಳಿಯಿರುವ ಚರಂಡಿಗೆ ಬಿದ್ದು ಚರಂಡಿಗಳಲ್ಲಿ ಹೂಳು ತುಂಬಿ ದುರ್ನಾತ ಬೀರುತ್ತಿವೆ.
-ಎಸ್.ಜಿ. ತೆಗ್ಗಿನಮನಿ