ಬರಗಾಲ ಪ್ರದೇಶ: ಖಂಡನೆ
ಮುಂಡರಗಿ: ಬರಗಾಲದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರೂ ಮುಂಡರಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸದ ಸರ್ಕಾರದ ಕ್ರಮ ಖಂಡನೀಯ ಎಂದು ರಾಜ್ಯ ಕುರಿ, ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಆರೋಪಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೃಷಿ ಇಲಾಖೆ ನಿಗದಿಪಡಿಸಿದ ಶೇ. 25ರಷ್ಟು ಭೂಮಿಯೂ ಬಿತ್ತನೆಯಾಗಿಲ್ಲ. ಹೆಚ್ಚು ಮುಂಗಾರು ಬಿತ್ತನೆ ಕ್ಷೇತ್ರ ಹೊಂದಿರುವ ತಾಲೂಕು ಅತಿ ಕಡಿಮೆ ಬಿತ್ತನೆಯಾಗಿದೆ. ಈ ಭಾಗದ ರೈತರ ಸಮಸ್ಯೆ, ತೊಂದರೆ ಎತ್ತಿ ತೋರಿಸುತ್ತದೆ. ಸರ್ಕಾರ ಕಳೆದ ವರ್ಷ ತುಂಬಿಸಿಕೊಂಡ ಮಳೆಹಾನಿ ಪರಿಹಾರಕ್ಕೆ ಇದುವರೆಗೂ ಒಂದೂ ಪೈಸೆ ವಿಮೆ ಹಣ ನೀಡಿಲ್ಲ. ನಾವು ಸಂಸದರು, ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದರು.