ಮೂವರು ನಕಲಿ ವೈದ್ಯರ ಬಂಧನ
ಗದಗ: ಡಿಎಚ್ಒ ಡಾ ಡಿ.ಬಿ. ಚನ್ನಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಅವಳಿ ನಗರದ ಹಲವೆಡೆ ದಾಳಿ ಮಾಡಿ, ಮೂವರು ನಕಲಿ ವೈದ್ಯರನ್ನು ಬಂಧಿಸಲಾಗಿದೆ. ಒಬ್ಬ ಪರಾರಿಯಾಗಿದ್ದಾನೆ.
ಬಂಧಿತರನ್ನು ಎಂ.ಕೆ. ಸರಕಾರ, ಎಸ್.ಕೆ. ಸರಕಾರ ಹಾಗೂ ಬಿಸ್ವಾಸ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಕೋಲ್ಕತ್ತಾ ಮೂಲದವರು. ಮೂಲವ್ಯಾಧಿಗೆ ಚಿಕಿತ್ಸೆ ನೀಡುತ್ತಿದ್ದರು. ಡಾ ಬಿ.ಜಿ. ಪಾಟೀಲ, ಡಾ ಹಿರೇಗೌಡ್ರ, ಡಾ ಎಸ್.ಎಸ್. ನೀಲಗುಂದ, ಆರ್.ವಿ. ಹಿರೇಮಠ ದಾಳಿ ನೇತೃತ್ವ ವಹಿಸಿದ್ದರು.
ನಾಲ್ಕು ಕಡೆ ದಾಳಿ: ನಗರದ ಡಿಸಿ ಮಿಲ್ ರಸ್ತೆಯಲ್ಲಿರುವ ಎರಡು ಮೂಲವ್ಯಾಧಿ ಕ್ಲಿನಿಕ್, ಕೃಷ್ಣಾ ಚಿತ್ರ ಮಂದಿರ ಸಮೀಪದಲ್ಲಿರುವ ಮಾ ಕ್ಲಿನಿಕ್ ಹಾಗೂ ಜೋಡಿ ಮಾರುತಿ ದೇವಸ್ಥಾನ ಬಳಿಯ ಮತ್ತೊಂದು ಕ್ಲಿನಿಕ್ ಮೇಲೂ ದಾಳಿ ನಡೆದಿತ್ತು. ಚಿಕಿತ್ಸೆಗೆ ಬಂದಿದ್ದ ರೋಗಿಗಳು ಕಕ್ಕಾಬಿಕ್ಕಿಯಾಗಿ ಅಲ್ಲಿಂದ ತೆರಳಿದರು.
ಡಿಸಿ ಮಿಲ್ ಬಳಿ ಇರುವ ಮೂಲವ್ಯಾಧಿ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಡಾ ಕುಮಾರ್ ಪರಾರಿಯಾಗಿದ್ದಾರೆ. ದಾಳಿಗೆ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸಿದರು. ಈ ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಾರೆ. ಅವರಿಂದಾಗಿಯೇ ನಾವು ಗುಣಮುಖರಾಗಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ಲಂಚ ತಿನ್ನುತ್ತಾರೆ. ಮೊದಲು ಅದನ್ನು ತಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ನಿಂದಿಸಿದರು.
6 ತಿಂಗಳಲ್ಲಿ ನಕಲಿ ಮುಕ್ತ ಜಿಲ್ಲೆ: ಆರು ತಿಂಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು ನಕಲಿ ವೈದ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುತ್ತೇವೆ. ತಾಲೂಕು ಕೇಂದ್ರಗಳು ಮತ್ತು ಗ್ರಾಮಗಳಲ್ಲೂ ದಾಳಿ ಮಾಡಲಾಗುವುದು. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುತ್ತಿರುವ ವೈದ್ಯರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ದಾಳಿ ನಕಲಿ ವೈದ್ಯರಿಗೆ ಎಚ್ಚರಿಕೆ ಗಂಟೆಯಾಗಿದೆ. ಉಳಿದ ನಕಲಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಲು ಸಿದ್ಧವಾಗಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ ಡಿ.ಬಿ. ಚೆನ್ನಶೆಟ್ಟಿ ತಿಳಿಸಿದರು.