ಅಕ್ರಮ ಕಲ್ಲು ಗಣಿ: ನೋಟಿಸ್ಗೂ ಜಗ್ಗದ ಕೆಎನ್ನಾರ್ ಕಂಪನಿ
ಗದಗ: ರಸ್ತೆ ಕಾಮಗಾರಿಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಕಂಪನಿ, ಅದಕ್ಕಾಗಿ ಪರವಾನಗಿ ಇಲ್ಲದೆ 4 ಎಕರೆ 10 ಗುಂಟೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 15 ದಿನಗಳಲ್ಲಿ 4.38 ಕೋಟಿ ದಂಡ ಪಾವತಿಸುವಂತೆ ನೋಟಿಸ್ ನೀಡಿ 22 ದಿನಗಳಾದರೂ ಕಂಪನಿ ಜಪ್ಪಯ್ಯ ಎಂದಿಲ್ಲ.
ನರಗುಂದ-ಗದಗ-ಮುಂಡರಗಿ ರಸ್ತೆ ಮೇಲ್ದರ್ಜೆಗೆ ಏರಿಸುವ ರು. 150 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಯನ್ನು ಕೆಎನ್‌ಆರ್ ಕಂಪನಿ ಪಡೆದಿತ್ತು. ಅದಕ್ಕೆ ಬೇಕಾಗುವ ಜಲ್ಲಿ ಕಲ್ಲುಗಳಿಗಾಗಿ (ಕಡಿ) ಲಕ್ಕುಂಡಿ ಗ್ರಾಮ ವ್ಯಾಪ್ತಿಯ ಸರ್ವೆ ನಂ 723-1ಋ-2ಇ-3ಆ-4ಇ1 (3 ಎಕರೆ) ಪಟ್ಟಾ ಜಮೀನನಲ್ಲಿ ಕಲ್ಲು ಗಣಿ ಗುತ್ತಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಅದಕ್ಕೇ ಅನುಮತಿ ಸಿಕ್ಕಿಲ್ಲ. ಆದರೂ, ಸಮೀಪದಲ್ಲೇ 4 ಎಕರೆ 10 ಗುಂಟೆ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿದ್ದು ಸಾಬೀತಾಗಿದೆ.
ನಿಯಮ ಉಲ್ಲಂಘನೆ: ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಕಳೆದ ನ. 30ರಂದು ಭೇಟಿ ನೀಡಿದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಅನಧಿಕೃತ ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಸಂಗ್ರಹ ಮಾಡಿದ್ದಕ್ಕೆ ರು. 26.38 ಲಕ್ಷ ದಂಡ ವಿಧಿಸಿ, ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಕಂಪನಿಗೆ ಸೂಚಿಸಿತ್ತು. ಆದರೆ, ಕಂಪನಿ ಕಲ್ಲು ಗಣಿಗಾರಿಕೆ ಮುಂದುವರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಏ. 4ರಂದು ಮತ್ತೊಮ್ಮೆ ಭೇಟಿ ನೀಡಿ, ರು. 4.38 ಕೋಟಿ ದಂಡ ವಿಧಿಸಿ, 15 ದಿನಗಳಲ್ಲಿ ಪಾವತಿಸುವಂತೆ ನೋಟಿಸ್ ನೀಡಿದೆ. ಇದಕ್ಕೂ ಜಗ್ಗದೆ ಕಂಪನಿ ಗಣಿಗಾರಿಕೆ ಮುಂದುವರಿಸಿದೆ.
ನಮಗೆ ಸಪೋರ್ಟ್ ಇದೆ: ಕಂಪನಿ ಅಧಿಕಾರಿಗಳ ಮಾತು ಎಷ್ಟು ವಿಚಿತ್ರವೆಂದರೆ, ನಾವೇನು ಈ ಕೆಲಸ ನಮಗಾಗಿ ಮಾಡುತ್ತಿಲ್ಲ. ಸರ್ಕಾರದ ಕೆಲಸ. ನಮಗೆ ಯಾರು ನೋಟಿಸ್ ಕೊಟ್ಟರೂ ಉತ್ತರಿಸುವ ಅಗತ್ಯವಿಲ್ಲ, ದಂಡ ಭರಿಸುವುದೂ ಬೇಕಿಲ್ಲ. ಈ ಕುರಿತು ನಾವು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಮಗೆ ರಾಜಕೀಯ ಬೆಂಬಲ ಇದೆ ಎನ್ನುತ್ತಾರೆ. ಆದರೆ, ಪ್ರಕರಣ ದಾಖಲಿಸಿರುವ ಕುರಿತು ಯಾವುದೇ ಮಾಹಿತಿ ನೀಡುವ ಧೈರ್ಯ ತೋರುತ್ತಿಲ್ಲ.
ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕೆಎನ್‌ಆರ್ ಕಚೇರಿಯಲ್ಲಿ ವಿಚಾರಿಸಿದರೆ, ನಮ್ಮ ಹಿರಿಯ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ವಿಠ್ಠಲ ಎಂಬುವರಿಗೆ ಕರೆ ಮಾಡಿದರೆ, ನಾವು ಯಾರಿಗೂ ಸ್ಪಷ್ಟೀಕರಣ ನೀಡಬೇಕಾದ ಅಗತ್ಯವಿಲ್ಲ. ಸರ್ಕಾರದ ರಸ್ತೆ ಮಾಡಲು ಗಣಿಗಾರಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.