ಎಸ್.ವಿ. ಸಂಕನೂರ ಗೆಲವು: ಸಂಭ್ರಮ
ಶಿರಹಟ್ಟಿ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಾ. ಎಸ್.ವಿ. ಸಂಕನೂರ ಗೆಲವು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತ ಬಳಿ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಜಾನು ಲಮಾಣಿ ಮಾತನಾಡಿ, ಕಾರ್ಯಕರ್ತರ ಸಂಘಟನೆ, ಪರಿಶ್ರಮ ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿಗೆ ತಂದ ಜನಪರ ಯೋಜನೆಗಳು, ನರೇಂದ್ರ ಮೋದಿ ಅಲೆ, ಪಕ್ಷದ ತತ್ವ ಸಿದ್ಧಾಂತ ಹಾಗೂ ಹಿಂದಿನ ಕೇಂದ್ರ ಯುಪಿಎ ಸರ್ಕಾರದ ದುರಾಡಳಿತವೇ ಬಿಜೆಪಿ ಹಾಗೂ ಸಂಕನೂರ ಗೆಲವಿಗೆ ಕಾರಣ ಎಂದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಯಲ್ಲಪ್ಪ ಇಂಗಳಗಿ, ಶಿದ್ರಾಮಯ್ಯ ಹಾವೇರಿಮಠ, ಎಸ್.ಬಿ. ಕೋರಿಶೆಟ್ಟರ್, ಶಶಿಧರ ರಾನಡೆ, ಶಶಿಧರ ಮಣ್ಣೂರ, ಆನಂದ ಸೊರಟೂರ, ತಿಪ್ಪಣ್ಣ ಲಮಾಣಿ, ಎಸ್.ಪಿ. ಪೂಜಾರ, ನೀಲಪ್ಪ ಲಮಾಣಿ, ಶಿವಪುತ್ರಪ್ಪ ಹತ್ತಿಕೋಟಿ, ಶಫಿ ಹೆಸರೂರ ಮತ್ತಿತರರು ಇದ್ದರು.
ಮುಂಗಾರು ಹಂಗಾಮು ಬೆಳೆ ವಿಮಾ ಯೋಜನೆ
ಗದಗ: 2014ರ ಮುಂಗಾರು ಹಂಗಾಮಿಗಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಾರಿಯಾಗಿದ್ದು, ಹೋಬಳಿ ಮಟ್ಟಕ್ಕೆ ನಿರ್ದೇಶಿತ ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆ ಹತ್ತಿ ಇರುತ್ತವೆ. ರೈತರು ಈ ಯೋಜನೆಯಡಿ ಪಾಲ್ಗೊಳ್ಳಲು ಜೂ. 30 ಕೊನೆ ದಿನವಾಗಿದೆ. ಬೆಳೆ ಸಾಲ ಪಡೆದ, ಪಡೆಯುವ ರೈತರು ಈ ಯೋಜನೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳುವುದು ಐಚ್ಛಿಕವಾಗಿದೆ. ಬೆಳೆ ಸಾಲ ಪಡೆಯದ ರೈತರು ಕನಿಷ್ಠ ಶೇ. 50ರಷ್ಟು ವಿಮಾ ಮೊತ್ತದಿಂದ ಗರಿಷ್ಠ ವಿಮಾ ಮೊತ್ತದವರೆಗೆ ವಿಮೆ ಮಾಡಲು ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಗದಗ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗದಗ: 2014-15ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಅಂಗವಿಕಲ ವಿದ್ಯಾರ್ಥಿ ವೇತನ ಯೋಜನೆಯಡಿ ಆಯವ್ಯಯ ಬಿಡುಗಡೆಯಾಗಿದ್ದು, ಅರ್ಹ ಅಂಗವಿಕಲ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ವಿಕಲಚೇತನರು ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ತಮಗೆ ಸಂಬಂಧಿಸಿದ ಶಾಲೆ, ಕಾಲೇಜುಗಳ ಮುಖ್ಯಸ್ಥರ ಮೂಲಕ ದೃಢೀಕರಣದೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜು. 15ರೊಳಗೆ ಕಚೇರಿ ಅವಧಿಯಲ್ಲಿ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ 06 ಗದಗ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಗದಗ ತಾಲೂಕು-ರಾಜೇಶ ಚನ್ನಗೇರಿ- 9743462582), ಮುಂಡರಗಿ ತಾಲೂಕು-ಶಶಿಕಲಾ ವಡ್ಡಟ್ಟಿ- 8722670616, ಶಿರಹಟ್ಟಿ ತಾಲೂಕು- ಭಾರತಿ ಮೂರಶಿಳ್ಳಿ- 08151042039, ರೋಣ ತಾಲೂಕು-ಡಿ.ವೈ. ಆಲೂರ- 9591842993 ನರಗುಂದ ತಾಲೂಕು-ಬಸಪ್ಪ ನಾಯ್ಕರ- 8861975903)ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಂಗವಿಕಲರಿಂದ ಅರ್ಜಿ ಆಹ್ವಾನ
ಗದಗ: ಜಿಲ್ಲಾ ವ್ಯಾಪ್ತಿಯ ಅಂಗವಿಕಲರಿಗೆ ಸಾಧನ, ಸಲಕರಣೆ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ಸಾಧನ ಸಲಕರಣೆ (ಸಾದಾ ತ್ರಿಚಕ್ರ ವಾಹನ, ವೀಲ್ಚೇರ್, ಶ್ರವಣ ಸಾಧನ, ಸಾದಾ ಕ್ರಚಸ್, ಎಲ್ಬೋ ಕ್ರಚಸ್, ಅಂಧರ ಬಿಳಿಕೋಲು, ಬ್ರೈಲ್ ವಾಚ್, ಹ್ಯಾಂ ಸ್ಟಿಕ್, ಪೂರ್ಣ ಅಂಧರಿಗೆ ಟಾಕಿಂಗ್ ಲ್ಯಾಪ್ಟಾಪ್) ಅಗತ್ಯವಿರುವ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ದಾಖಲೆಗಳ ಝೇರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ- 6 ಗದಗ ಇವರಿಗೆ ಜು. 10ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ.