ಜಮೀನಲ್ಲೂ ಮರಳು ಮಾಫಿಯಾ
-ಅಶೋಕ ಸೊರಟೂರ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಕೃಷಿಭೂಮಿಯಲ್ಲಿ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ಲಕ್ಷ್ಮೇಶ್ವರ ಹೋಬಳಿಯ ಹುಲ್ಲೂರು ಪ್ರಮುಖ ಮರಳು ಮಾಫಿಯಾ ತಂಡದ ನೆಲೆಯಾಗಿದೆ. ಹಲ್ಲೂರು ಹಳ್ಳದ ಗುಂಟ ಹರಿದಿರುವ ದೊಡ್ಡ ಹಳ್ಳವು ಇಲ್ಲಿನ ಮರಳು ಲೂಟಿಕೋರರಿಗೆ ವರವಾಗಿರುವುದು ಸತ್ಯ ಸಂಗತಿಯಾಗಿದೆ. ಹುಲ್ಲೂರು, ಅಮರಾಪುರ, ಪು.ಬಡ್ನಿ, ಬಟ್ಟೂರು, ಬೂದಿಹಾಳ, ಕೊಕ್ಕರಗುಂದಿ, ಅಂಕಲಿ ಇತರೆಡೆ ಅವ್ಯಾಹತವಾಗಿ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಕೃಷಿಭೂಮಿ ಬಿಡದ ಲೂಟಿಕೋರರು: ಹುಲ್ಲೂರು ಮತ್ತು ಅಮರಾಪುರ ಗ್ರಾಮಗಳಲ್ಲಿ ಈಗಾಗಲೆ ಸಾಕಷ್ಟು ಕೃಷಿಭೂಮಿಯು ಅಕ್ರಮ ಮರಳು ತೆಗೆಯುತ್ತಿರುವವರ ಕೈಗೆ ಸಿಕ್ಕು ಹಾಳಾಗಿವೆ. ಉತ್ತು ಬಿತ್ತನೆ ಮಾಡಬೇಕಾದ ನೂರಾರು ಹೆಕ್ಟೇರ್ ಹೊಲಗಳು ಇಂದು ಅಕ್ರಮ ಮರಳು ಗಣಿಗಾರಿಕೆಗೆ ಸಿಕ್ಕು ಹೊಂಡಗಳಾಗಿ ಮಾರ್ಪಟ್ಟಿವೆ.
ಕೃಷಿಭೂಮಿಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಸುಮಾರು 15-20 ಅಡಿ ಆಳದಲ್ಲಿ ಗುಂಡಿಗಳನ್ನು ತೋಡಿ ಮರಳು ಎತ್ತಿ ಸಾಗಿಸುವುದರಿಂದ ಜಮೀನು ಹಾಳಾಗುತ್ತಿವೆ. ರೈತರು ಹಾಗೂ ಅಕ್ರಮ ಮರಳು ಮಾಫಿಯಾ ತಂಡದೊಂದಿಗೆ ಸೇರಿ ಭೂಮಿಯ ಒಡಲು ಬಗೆಯುತ್ತಿರುವುದು ನೋಡಿದರೆ ಎಂಥವರ ಎದೆಯಲ್ಲೂ ರೋಷ ಉಕ್ಕುತ್ತದೆ.
ಕಂದಾಯ ಅಧಿಕಾರಿಗಳು, ಪೊಲೀಸರು, ಭೂಗರ್ಭ ಮತ್ತು ಖನಿಜ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ವಿಷಯದಲ್ಲಿ ಹಲವಾರು ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದಾರೆ. ಆದರೆ, ಪರಿಣಾಮ ಮಾತ್ರ ಶೂನ್ಯವಾಗುತ್ತಿರುವುದರಿಂದ ಸೂಕ್ತ ಕ್ರಮ ಅಗತ್ಯ. ಸರ್ಕಾರ ಸ್ಪಷ್ಟ ಮರಳು ನೀತಿ ಜಾರಿಗೆ ತರುವಲ್ಲಿ ಮೀನಮೇಷ ಎನಿಸುತ್ತಿರುವುದು ಲೂಟಿಕೋರರಿಗೆ ಹಬ್ಬವಾಗಿರುವುದರಲ್ಲಿ ಸಂದೇಹವಿಲ್ಲ.
ಲೂಟಿಗೆ ಕುಮ್ಮಕ್ಕು: ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಅಕ್ರಮ ಮರಳು ಮಾಫಿಯಾ ಗುಂಪುಗಳ ನಡುವೆ ಒಳ ಒಪ್ಪಂದವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಮರಾಪುರ ಹಾಗೂ ಹುಲ್ಲೂರು ಗ್ರಾಮಸ್ಥರ ಆರೋಪ. ಹುಲ್ಲೂರು ಮತ್ತು ಅಮರಾಪುರದಿಂದ ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್ಗಳು ಅಕ್ರಮ ಮರಳು ಸಾಗಿಸುತ್ತಿದ್ದರೂ ಪೊಲೀಸ್ ಸಿಬ್ಬಂದಿ ಹಾಗೂ ಭೂಗರ್ಭ ಮತ್ತು ಖನಿಜ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ.