ರೋಣ: ಕಸ ವಿಲೇವಾರಿ ನಿರ್ಲಕ್ಷ್ಯ
ರೋಣ: ಎಲ್ಲೆಂದರಲ್ಲಿ ಗಾಳಿ ಪಟದಂತೆ ಹಾರಾಡುತ್ತ ಬೀಳುತ್ತಿರುವ ಕಸ, ಕಡ್ಡಿ, ಹಾಳೆ ತುಂಡುಗಳು, ಮುಖ್ಯ ರಸ್ತೆಯಲ್ಲಿಯೇ ಕೂಡಿದ ತ್ಯಾಜ್ಯದ ರಾಶಿ, ಸಮರ್ಪಕ ಕಂಟೇನರ್ ನಿರ್ವಹಣೆ ಇಲ್ಲದೇ ಎಲ್ಲೆಂದರಲ್ಲಿ ಬಿಸಾಕಿದ ಕಸ. ಸ್ವಚ್ಛತೆ ಕಾಣದೇ ಗಬ್ಬು ನಾರುತ್ತಿರುವ ಗಟಾರುಗಳು. ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೋಣ ಪಟ್ಟಣದ ಜನತೆಗೆ ಸಮರ್ಪಕ ವಿಲೇವಾರಿ ಆಗದ ತ್ಯಾಜ್ಯದ್ದೇ ಚಿಂತೆಯಾಗಿದ್ದು, ಸಾಂಕ್ರಾಮಿಕ ಕಾಯಿಲೆ ಭೀತಿ ಕಾಡುತ್ತಿದೆ.
ಪಟ್ಟಣದಲ್ಲಿ ಕಸ ವಿಲೇವಾರಿಗೆ ಸಮರ್ಪಕ ಕಂಟೇನರ್ ಬಳಕೆಯಿಲ್ಲದ್ದರಿಂದ ರಸ್ತೆ ಬದಿಯ ಗೂಡಂಗಡಿ ವ್ಯಾಪಾರಸ್ಥರು, ನಿವಾಸಿಗಳು ಅಂಗಡಿ ಮತ್ತು ಮನೆಯಲ್ಲಿನ ಕಸ ತಂದು ರಸ್ತೆಯಲ್ಲಿಯೇ ಬಿಸಾಕುತ್ತಾರೆ. ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಇಲ್ಲಿದೆ.
ಕಂಟೇನರಗಳೇ ಕಾಣುತ್ತಿಲ್ಲ: ರೋಣ ಪಟ್ಟಣದ ಎಲ್ಲ ಬಡಾವಣೆ ಸೇರಿದಂತೆ ಪಟ್ಟಣದ ಬಹುತೇಕ ಕಡೆಗಳಲ್ಲಿ ಹಾಗೂ ಬಸ್ ನಿಲ್ದಾಣದಿಂದಲ್ಲಿಯೂ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲು ಕಂಟೇನರ್‌ಗಳನ್ನು ಇಟ್ಟಿಲ್ಲ. ಕಂಟೇನರ್‌ಗಳು ಇಲ್ಲದ್ದರಿಂದ ಅಂಗಡಿ ವ್ಯಾಪಾರಸ್ಥರು ಮತ್ತು ಜನತೆ ಮನೆಯಲ್ಲಿನ ಕಸ ತಂದು, ರಸ್ತೆ ಮತ್ತು ಗಟಾರದಲ್ಲಿ ಬೀಸಾಡುವಂತಾಗಿದೆ.
ಚಿಕೂನ್ ಗುನ್ಯಾ ಭೀತಿ: ಕಸವೆಲ್ಲ ರಸ್ತೆ ಪಕ್ಕದ ಗಟಾರದಲ್ಲಿ ಬಂದು ಬೀಳುತ್ತದೆ. ಇದರಿಂದ ಗಟಾರು ನೀರು ಹರಿಯದೇ ಒಂದೆಡೆ ನಿಲ್ಲುತ್ತದೆ. ಗಟಾರಗಳು ಸೊಳ್ಳೆಗಳ ತಾಣವಾಗಿ ಮಾರ್ಪಡುತ್ತಿದ್ದು, ಜನತೆ ಡೆಂಘೀ, ಚಿಕೂನ್‌ಗುನ್ಯಾ, ಕಾಲರಾ, ಮಲೇರಿಯಾದಂತ ಸಾಂಕ್ರಾಮಿಕ ಕಾಯಿಲೆಯ ಭೀತಿ ಎದುರಿಸುವಂತಾಗಿದೆ.
- ಪಿ.ಎಸ್. ಪಾಟೀಲ್