ಲಕ್ಷ್ಮೇಶ್ವರ ಬಸ್ ನಿಲ್ದಾಣ ಅವ್ಯವಸ್ಥೆ: ಆಕ್ರೋಶ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 25
ಪಟ್ಟಣದ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿದ್ದು, ಇಲ್ಲಿನ ಡಿಪೋ ಮ್ಯಾನೇಜರ್ ಅವರಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ ಶಿರಹಟ್ಟಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಬಸ್ ನಿಲ್ದಾಣದ ಅವ್ಯವಸ್ಥೆಗೆ ಕಾರಣವಾಗಿರುವ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಕರವೇ ತಾಲೂಧ್ಯಕ್ಷ ಶರಣು ಗೋಡಿ ಮಾತನಾಡಿ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಎತ್ತ ಕಡೆ ಹೋದರೂ ಮಲ, ಮೂತ್ರಗಳ ವಾಸನೆ ತುಂಬಿದೆ. ಸ್ವಚ್ಛತೆ ಕಾಣದ ಚರಂಡಿ, ಗಲೀಜು ತುಂಬಿರುವ ಕುಡಿಯುವ ನೀರಿನ ತೊಟ್ಟಿ, ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ನ ತಾಜ್ಯ ಹರಿದು ಹೋಗಿ ಬಿದ್ದಿರುವ ತಗ್ಗು ಗುಂಡಿಗಳಿಂದ ಕೂಡಿದೆ. ನಿಲ್ದಾಣದ ಮುಂಭಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಿಸಲು ತೆಗೆದಿರುವ ಗುಂಡಿಗಳು. ಶೌಚಾಲಯ ಕೊಳಚೆ ನೀರು ಬಸ್ ನಿಲ್ದಾಣದಲ್ಲಿ ನಿಂತು ಗಬ್ಬು ವಾಸನೆ ಬೀರಿ ಸೊಳ್ಳೆ ತವರಾಗಿದೆ ಎಂದು ದೂರಿದರು.
ಪಟ್ಟಣದ ಸಾರಿಗೆ ಘಟಕ ವ್ಯವಸ್ಥಾಪಕರು ಬಸ್ ನಿಲ್ದಾಣ ಸ್ವಚ್ಛತೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದು, ಬಸ್ ನಿಲ್ದಾಣವನ್ನು ಸುವ್ಯವಸ್ಥಿತವಾಗಿಡಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಡಿಪೋ ಮ್ಯಾನೇಜರ್ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ನಿಲ್ದಾಣದಲ್ಲಿ ಪ್ರತಿಭಟನೆನಿರತ ಕರವೇ ಕಾರ್ಯಕರ್ತರ ಬಳಿಗೆ ಗದಗ ಡಿವಿಜನ್ನ ಸಹಾಯಕ ಸಾರಿಗೆ ನಿಯಂತ್ರಣಾಧಿಕಾರಿ ನಿರಂಜನ, ಸಹಾಯಕ ಕಾರ್ಮಿಕ ಅಧಿಕಾರಿ ಸತ್ಯನಾರಾಯಣ ಆಗಮಿಸಿದಾಗ ಪ್ರತಿಭಟನಾನಿರತರು ಬಸ್ ನಿಲ್ದಾಣದ ಪ್ರತಿ ಮೂಲೆ ತೋರಿಸಿ ಬಸ್ ನಿಲ್ದಾಣದ ನರಕದ ದರ್ಶನ ಮಾಡಿಸಿದರು.
ನಾಗೇಶ ಅಮರಾಪುರ, ಮಹೇಶ ಮೇಟಿ, ತನ್ವೀರ ಮುಳಗುಂದ, ನಾಗರಾಜ ಬೆಳಮೊಟಗಿ, ಶಿರಾಜ ಡಾಲಾಯತ್, ಸುರೇಶ ಕುಂಬಾರ, ಪ್ರಕಾಶ ಡಂಬಳ, ಎಸ್.ಸಿ. ಕೊಂಚಿಗೇರಿಮಠ, ಎಂ.ಎಸ್. ಅಕ್ಕಿ, ಎಂ.ಕೆ. ಕಲಬುರ್ಗಿ, ಆನಂದ ಸೂಲಿ, ಅಣ್ಣಪ್ಪ ರಾಮಗೇರಿ, ರಾಜು ಖರಾಠೆ, ಲಕ್ಷ್ಮಣ ಹಾದಿಮನಿ, ಬಸವರಾಜ ಯತ್ನಳ್ಳಿ, ಬಸವರಾಜ ನಡುವಿನಕೇರಿ, ಶಿವಲಿಂಗು ಹೊತಗಿಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.