ಲೈಸನ್ಸ್‌ಗೆ ವಿದ್ಯಾರ್ಹತೆ ಬೇಡ: ಒತ್ತಾಯ
ಗಜೇಂದ್ರಗಡ: ಲಾರಿ, ಗೂಡ್ಸ್ ವಾಹನ ಚಾಲಕರು ವಾಹನ ಚಾಲನೆ ಪರವಾನಗಿ ಹೊಂದಲು 8ನೇ ತರಗತಿ ಪಾಸಾಗಿರಬೇಕೆಂಬ ಸಾರಿಗೆ ಇಲಾಖೆ ನಿಯಮ ಅನಕ್ಷರಸ್ಥ ಚಾಲಕರಿಗೆ ತೀವ್ರ ತೊಂದರೆಯಾಗಿದ್ದು, ವಿದ್ಯಾರ್ಹತೆ ಕಡ್ಡಾಯ ನೀತಿ ಕೈಬಿಟ್ಟು ಚಾಲನಾ ಪರಿಣತ ಮೇರೆಗೆ ಪರವಾನಗಿ ನೀಡುವಂತೆ ಸ್ಥಳೀಯ ಕಾಲಕಾಲೇಶ್ವರ ಲಾರಿ ಮಾಲೀಕರು, ಚಾಲಕರ ಸಂಘ ಸಾರಿಗೆ ಇಲಾಖೆಗೆ ಒತ್ತಾಯಿಸಿದೆ.
ಸ್ಥಳೀಯ ಹಿರೇದುರ್ಗಾದೇವಿ ದೇಗುಲದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸಂಘದ ಅಧ್ಯಕ್ಷ ಚಂಬಣ್ಣ ಚವಡಿ ಮಾತನಾಡಿ, ಈ ಹಿಂದೆ ಸರ್ಕಾರ ಗೂಡ್ಸ್ ಮತ್ತು ಲಾರಿ ಚಾಲಕರು ಲೈಸನ್ಸ್ ಪಡೆಯಲು ಶಿಕ್ಷಣದ ಅರ್ಹತೆ ಕಡ್ಡಾಯಗೊಳಿಸಿದ್ದಿಲ್ಲ. ಈಗ ಚಾಲಕರು ಲೈಸೆನ್ಸ್ ಹೊಂದಲು 8ನೇ ತರಗತಿ ವಿದ್ಯಾರ್ಹತೆ ಆಗಿರಬೇಕೆಂಬ ಸಾರಿಗೆ ಇಲಾಖೆ ಆದೇಶ ಚಾಲಕರು ಮತ್ತು ಮಾಲಕರಿಗೆ ತೊಂದರೆ ಮಾಡಿದೆ.
ಬಹುತೇಕ ಚಾಲಕರು ಇಲಾಖೆ ನಿಯಮದಂತೆ ವಿದ್ಯಾರ್ಹತೆ ಹೊಂದಿಲ್ಲ. ಚಾಲಕರು ವಾಹನ ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಲಾರಿ ಮಾಲೀಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ಟಂಟಂ, ಟಾಟಾಏಸ್ ಸೇರಿದಂತೆ ಗೂಡ್ಸ್ ವಾಹನಗಳು ಸರಕು ಸಾಗಣೆಗೆ ಮಾತ್ರ ಬಳಸಬೇಕು. ಪ್ರಯಾಣಿಕರನ್ನು ಹೊತ್ತೊಯ್ಯಬಾರದು ಎಂದು ಸಂಘದಿಂದ ಚಾಲಕರಿಗೆ ಎಚ್ಚರಿಕೆ ನೀಡಲಾಯಿತು. ಎಂ.ಕೆ. ಹಿರೇಹಾಳ, ಗುರು ರಾಯಬಾಗಿ, ಈರಣ್ಣ ಪಲ್ಲೇದ, ಬಸವರಾಜ ಯಲಿಗಾರ, ಶ್ಯಾಮಿದಲಿ ದಿಂಡವಾಡ, ಹಾಸಿಂ ಹಿರೇಹಾಳ, ಪ್ರಕಾಶ ಕಿಲ್ಲೇದಾರ, ವಿ.ಎಸ್. ಚೋಳಿನ, ಈರಪ್ಪ ಮೋಹಿತೆ, ಇಸ್ಮಾಯಿಲಸಾಬ ದಿಂಡವಾಡ, ಬಾಬು ಮೂಲಿಮನಿ, ಅಮರೇಶ ಮಾರನಬಸರಿ, ರಂಜಾನಸಾಬ ಮ್ಯಾಗೇರಿ, ಬಾಬು ಗೋಡೆಕಾರ ಮುಂತಾದವರು ಇದ್ದರು.