ಸಾಲಬಾಧೆ:ರೈತ ಆತ್ಮಹತ್ಯೆ
ನರಗುಂದ: ತಾಲೂಕಿನ ಸಂಕದಾಳ ಗ್ರಾಮದ ರೈತನೊಬ್ಬ ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಮೃತರನ್ನು ಸಂಕದಾಳ ಗ್ರಾಮದ ಭೀಮಪ್ಪ ಪ್ಯಾಟಿ (42) ಎಂದು ಗುರುತಿಸಲಾಗಿದೆ. ಅವರು ಹುಬ್ಬಳ್ಳಿಯ ಎಚ್‌ಡಿಎಫ್‌ಸಿ ಹಾಗೂ ಸಂಕನಾಳ ಗ್ರಾಮದಲ್ಲಿರುವ ವಿಎಸ್‌ಎಸ್ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಸ್ವಿತ್ವಕ್ಕೆ
ಗದಗ: ಬೆಟಗೇರಿಯ ಕೆ.ಸಿ. ಪಾರ್ಕ್‌ನಲ್ಲಿ ಇ.ಜಿ. ಚೋಳಿನ ಅಧ್ಯಕ್ಷತೆಯಲ್ಲಿ ಬುಧವಾರ ಸಾರ್ವಜನಿಕರು ಸಭೆ ಸೇರಿ ಗಣೇಶಸಿಂಗ ಬ್ಯಾಳಿ ನೇತೃತ್ವದಲ್ಲಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಸ್ಥಿತ್ವಕ್ಕೆ ತಂದರು. ಗದಗ ರೇಲ್ವೆ ನಿಲ್ದಾಣಕ್ಕೆ ಗದಗ-ಬೆಟಗೇರಿ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವುದನ್ನೂಳಗೊಂಡು ಹಲವಾರು ಬೇಡಿಕೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಹಂತ ಹಂತವಾಗಿ ಹೋರಾಟದ ರೂಪರೇಷಗಳು ಹಾಕಿಕೊಳ್ಳಲಾಯಿತು. ಕೇಂದ್ರ ರೇಲ್ವೆ ಸಚಿವರಿಗೆ ಎಲ್ಲ ಬೇಡಿಕೆಗಳು ಪೂರೈಸುವಂತೆ ಮನವರಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಎಸ್.ಆರ್. ರಂಗರೇಜಿ, ಜಿ.ಆರ್. ಕರಡಿ, ಎಸ್.ಆರ್.ನಂದಿಯಾಲ, ಕೆ.ವಿ. ಕುಂದಗೋಳ, ದೇವಿಸಿಂಗ್ ಬ್ಯಾಳಿ, ಯಲ್ಲಪ್ಪ ಕಾಂಬ್ಳೇಕರ, ಕೃಷ್ಣ ರಾಯಬಾಗಿ, ಡಿ.ಎ. ಮುಲ್ಲಾ, ವಿಷ್ಣು ಕಲಾಲ, ಎಸ್.ಎ. ಕ್ರೂಸ್, ಲಿಂಗರಾಜ ಬಗಲಿ, ಮಂಜುನಾಥ ತಳವಾರ, ಜಗದಾಳೆ ಎನ್.ಡಿ., ಜೆ.ಕೋಕಲೆ, ಐ.ಕೆ.ಪಟ್ಟಣಶೆಟ್ಟಿ, ಪ್ರಾಣೇಶ ಕುಲಕರ್ಣಿ, ಕೃಷ್ಣ ಲಕ್ಕುಂಡಿ, ಅರ್ಜುನಸಾ ಮೇರವಾಡೆ, ಉಮಾಕಾಂತ ಅಕ್ಕಿ, ಎನ್.ಡಿ. ಜಗಡೋಳೆ ಉಪಸ್ಥಿತರಿದ್ದರು. ಗಣೇಶಸಿಂಗ ಬ್ಯಾಳಿ ಸ್ವಾಗತಿಸಿದರು. ಯಲ್ಲಪ್ಪ ಕಾಂಬ್ಳೇಕರ ವಂದಿಸಿದರು.
ಕಾರ್ಮಿಕ ಕಾಯ್ದೆಜಾಗೃತಿ ಅವಶ್ಯ: ಎಂ. ಬಾಲಕೃಷ್ಣ
ಗದಗ: ವಾಣಿಜ್ಯೋದ್ಯಮಿಗಳಿಗೆ ಕಾರ್ಮಿಕ ಕಾಯ್ದೆಗಳ ಬಗ್ಗೆ ಜಾಗೃತಿ ಅವಶ್ಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ ಹೇಳಿದರು. ಅವರು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಲಾದ ಕಾರ್ಮಿಕ ಕಾಯ್ದೆಗಳ ಬಗ್ಗೆ ತಿಳಿವಳಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾರ್ಮಿಕ ಕಾಯ್ದೆಯಡಿಯಲ್ಲಿ 27 ಕಾನೂನುಗಳು ಅನ್ವಯವಾಗುತ್ತವೆ ಅದರಲ್ಲಿ ಕನಿಷ್ಠ ಪಕ್ಷ ಅವಶ್ಯವಿರುವಂತಹ ದಾಖಲಾತಿಯನ್ನು ಇಡಬೇಕಾಗುತ್ತದೆಂದು ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಕಾರ್ಯಾಗಾರವನ್ನು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯವರು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ತೋಂಟೇಶ ಕುರಡಗಿ, ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ, ಸಿದ್ದನಗೌಡ ಪಾಟೀಲ ಮಾತನಾಡಿದರು. ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ದೇವದಾಸ ಕಾಮತ ವಂದಿಸಿದರು.
ನೇಮಕ
ಗದಗ: ಕರ್ನಾಟಕ ಜನಹಿತ ವೇದಿಕೆ ಗದಗ ತಾಲೂಕು ಘಟಕದ ಸಹ ಕಾರ್ಯದರ್ಶಿಯನ್ನಾಗಿ ಗದಗ ತಾಲೂಕಿನ ನೀಲಗುಂದ ಗ್ರಾಮದ ಬಸವರಾಜ ಭಜಂತ್ರಿ ಅವರನ್ನು ಗದಗ ತಾಲೂಕು ಅಧ್ಯಕ್ಷ ಮರಿಯಪ್ಪ ವಡ್ಡರ ಅವರು ನೇಮಕ ಮಾಡಿ ಆದೇಶಿಸಿದ್ದಾರೆ ಎಂದು ಜಿಲ್ಲಾ ವಕ್ತಾರ ನಾಗೇಶ ಅಂಗಡಿ ತಿಳಿಸಿದ್ದಾರೆ.