ಪೂಜೆಗೆ ಸಿದ್ಧ ಮಣ್ಣೆತ್ತು
ಗಜೇಂದ್ರಗಡ: ಬಸವಣ್ಣಬೇಕೇನ್ರೀ ಬಸವಣ್ಣಾ, ಬರೀ ಹದಿನೈದು ರುಪಾಯಿಗೆ ಜೋಡಿ ಸೀಮೆ ಎತ್ತು. ಈಗ ಬಿಟ್ರ ಮುಂದಿನ ವರ್ಷದ ತನಕ ಇಂಥಾ ರೇಟಿಗೆ ಇಂತ ಜೋಡೆತ್ತು ಬಸವಣ್ಣ ಸಿಗಂಗಿಲ್ರೀ..
ಹೌದು, ಪಟ್ಟಣದ ಕುಂಬಾರ ಕುಟುಂಬದ ಮಹಿಳೆಯರು, ಮಕ್ಕಳು ಎಲ್ಲ ಸದಸ್ಯರು ಸೇರಿ ಕೆರೆಯ ಜಿಗುಟಾದ ಕರಿಮಣ್ಣು ತಂದು ಎತ್ತಿನ ಮೂರ್ತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ಮಣ್ಣಿನ ಎತ್ತುಗಳ ಕೊಡುಗಳಿಗೆ ಬಣ್ಣಹಚ್ಚಿ, ಕೊರಳಲ್ಲಿ ಗೆಜ್ಜೆ. ಆಭರಣ ಹಾಕಿದ ರೀತಿಯಲ್ಲಿ ನೂರಾರು ಬಸವಣ್ಣನ ಮೂರ್ತಿ ಸಿದ್ಧಪಡಿಸುತ್ತಾರೆ.
ಕೃಷಿಕರು ಮುಂಗಾರು ಹಂಗಾಮಿನ ಮೊದಲ ಹಬ್ಬವಾಗಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಆಚರಿಸುವ ಹಬ್ಬ ಕುಂಬಾರ ಕುಟುಂಬ ಮಕ್ಕಳು ಬೆಳ್ಳಂಬೆಳಗ್ಗೆ ಪುಟ್ಟಿಯಲ್ಲಿ ಮಣ್ಣಿನ ಬಸವನ ಮೂರ್ತಿ ಹೊತ್ತು ಪಟ್ಟಣದ ವಿವಿಧ ಬಡಾವಣೆ, ಕೃಷಿ ಮಾರುಕಟ್ಟೆಯ ವರ್ತಕರ ಅಂಗಡಿಗಳು, ದರ್ಗಾ, ಕಾಲಕಾಲೇಶ್ವರ ವೃತ್ತದ ಬಳಿ ಮಾರುಕಟ್ಟೆ ಅಂಗಡಿಗಳಿಗೆ ಕುಂಬಾರರು ಮಾರಾಟ ಮಾಡುತ್ತಾರೆ.
ನಂಬಿಕೆ ಮೇಲೆ ಬದುಕು: ಧಾರ್ಮಿಕ ನೆಲಗಟ್ಟಿನ ಮೇಲೆ ಬದುಕು ಸಾಗಿಸುವ ರೈತರು ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲು ಸಿದ್ಧಗೊಂಡಿರುವ ಬಸವಣ್ಣನ ಮೂರ್ತಿಯನ್ನು ಹಣ, ಜೋಳ, ದವಸ-ಧಾನ್ಯ, ಅಕ್ಕಡಿಕಾಳನ್ನು ಕುಂಬಾರರಿಗೆ ಕೊಟ್ಟು ಪಡೆಯುವ ಸಂಪ್ರದಾಯ ಪಟ್ಟಣ, ಗ್ರಾಮಗಳಲ್ಲಿ ಆಚರಣೆಯಲ್ಲಿದೆ.