ರಂಗಿಲ್ಲದ ಮಣ್ಣೆತ್ತಿನ ಅಮಾವಾಸ್ಯೆ
ಕನ್ನಡಪ್ರಭ ವಾರ್ತೆ, ಗದಗ, ಜೂ. 26
ಗದಗ ಕೃಷಿ ಅವಲಂಬಿತ ಜಿಲ್ಲೆಯಾಗಿದ್ದು, ಕಳೆದ ಹಲವು ದಿನಗಳಿಂದ ಮಳೆಯಾಗದಿರುವುದರಿಂದ ರೈತರ ಬೆಳೆಗಳೆಲ್ಲ ಒಣಗುವ ಹಂತಕ್ಕೆ ಬಂದಿವೆ. ಇದರ ಮಧ್ಯೆಯೇ ಶುಕ್ರವಾರ ಬಂದಿರುವ ಮಣ್ಣೆತ್ತಿನ ಅಮಾವಾಸ್ಯೆ ರೈತರು ಆಚರಿಸುವ ಹುಮ್ಮಸ್ಸನ್ನೇ ಕಳೆದುಕೊಂಡಿದ್ದು, ಈ ಬಾರಿ ರೈತನ ಪ್ರಥಮ ಮಣ್ಣಿನ ಪೂಜಾ ಹಬ್ಬ ಆರಂಭದಲ್ಲಿಯೇ ರಂಗು ಕಳೆದುಕೊಳ್ಳುವಂತಾಗಿದೆ.
ರೈತರ ಆಸರೆಯೇ ಎತ್ತುಗಳು: ಎತ್ತುಗಳೆಂದರೆ ರೈತರಿಗೆ ಎಲ್ಲಿಲ್ಲದ ಪ್ರೀತಿ. ರೈತರ ಮೂಲಾಧಾರವೇ ಎತ್ತುಗಳು (ಬಸವಣ್ಣ) ಇವು ರೈತರು ತಾವು ಮಾಡುವ ನಿತ್ಯದ ಕೃಷಿ ಕೆಲಸ, ಕಾರ್ಯಗಳಿಗೆ ಬೇಕೇ ಬೇಕು. ವರ್ಷಕ್ಕೊಮ್ಮೆ ಬರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತರು ಸಂಭ್ರಮದಿಂದ ಆಚರಿಸುವುದು ವಾಡಿಕೆ. ಆದರೆ, ಈ ಬಾರಿ ಅಗತ್ಯ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ರೈತರು ಬೆಳೆದ ಬೆಳೆಗಳೆಲ್ಲ ಬಿಸಿಲಿಗೆ ಕಮರಿ ಹೋಗುತ್ತಿವೆ. ಇದರ ಮಧ್ಯೆ ಬಂದ ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತರು ಕಾಟಾಚಾರಕ್ಕೆ ಆಚರಿಸುವಂತಾಗಿದೆ.
ಕೈಕೊಟ್ಟ ಮುಂಗಾರು: ಮುಂಗಾರು ರಾಜ್ಯಕ್ಕೆ ಆಗಮಿಸಿ ಹಲವು ದಿನಗಳೇ ಕಳೆದಿವೆ. ಈಗಾಗಲೇ ರೈತರು ಮುಂಗಾರು ಬೆಳೆಗಳಾದ ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಮಳೆಯಾಗದೇ ಒಣಗಿವೆ. ರೋಹಿಣಿ ಮಳೆ ಆರಂಭದಲ್ಲಿ ಆರ್ಭಟದ ಗುಡುಗು, ಮಿಂಚಿನೊಂದಿಗೆ ಪ್ರಾರಂಭವಾಯಿತಾದರೂ ಕೆಲವೇ ದಿನಗಳಲ್ಲಿ ಮರೆಯಾಯಿತು. ರೋಹಿಣಿ ಮಳೆ ನಂಬಿಕೊಂಡ ರೈತರು ತಮ್ಮ ಭೂಮಿ ಹದಗೊಳಿಸಿ ಹೆಸರು ಬಿತ್ತನೆ ಮಾಡಿದ್ದು, ನಂತರ ಬಂದ ಮೃಗಶಿರಾ ಆಗದಿರುವುದರಿಂದ ಚಿಗುರೊಡೆದ ಬೆಳೆಗಳೆಲ್ಲ ಪ್ರಸಕ್ತ ಮುಂಗಾರಿನಲ್ಲಿ ಕಮರುತ್ತಿವೆ.