ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಕನೂರ ಗೆಲವು: ವಿಜಯೋತ್ಸವ

Lingaraj Badiger
Updated On : 27 Jun 2014, 11:50 am

ಗಜೇಂದ್ರಗಡ: ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಗೆಲುವಿನ ಹಿನ್ನೆಲೆಯಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಆಡಳಿತವನ್ನು ಜನತೆ ಅಪೇಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದ ಪ್ರಬುದ್ದ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ದುರಾಡಳಿತ ನೀತಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪುರಸಭೆ ಸದಸ್ಯ ಪ್ರಭು ಚವಡಿ, ಶರಣಪ್ಪ ರೇವಡಿ, ಶಿದ್ದಣ್ಣ ಬಂಡಿ, ಅಶೋಕ ವನ್ನಾಲ, ವಿಜಯಲಕ್ಷ್ಮೀ ಚೆಟ್ಟರ್, ರವಿ ಕಲಾಲ, ಶೇಖಪ್ಪ ಇಟಗಿ, ಶಿವರುದ್ರಪ್ಪ ಸಂಕನೂರ, ಮುತ್ತಣ್ಣ ಚೆಟ್ಟರ್, ಮಹಾಂತೇಶ ಸಗರಿ, ಬಾಳು ಗೌಡರ, ಸೂಗುರೇಶ ಚೋಳಿನ್, ಶಂಕರ ಎಂಜಿನಿ ಉಪಸ್ಥಿತರಿದ್ದರು.
--
ಸಂಕನೂರ ಗೆಲವು: ಕಾರ್ಯಕರ್ತರ ಸಂಭ್ರಮ
ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ವಿಜಯಶಾಲಿಯಾದ ಸುದ್ದಿ ತಿಳಿಯುತ್ತಲೇ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಂಗಳವಾರ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮುಖಂಡ ಚಂಬಣ್ಣ ಬಾಳಿಕಾಯಿ ಮಾತನಾಡಿ, ಸಂಕನೂರ ಅವರ ಗೆಲವು ಬಿಜೆಪಿ ಕಾರ್ಯಕರ್ತರ ಗೆಲುವಾಗಿದೆ. ಪದವೀಧರರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಸಂಕನೂರ ಶ್ರಮಿಸುತ್ತಾರೆ. ಹೊರಟ್ಟಿಯವರು ತಮ್ಮ ಪುತ್ರನ ಮೂಲಕ 2ನೇ ಇನಿಂಗ್ಸ್ ಪ್ರಾರಂಭಿಸುವ ಪ್ರಯತ್ನಕ್ಕೆ ಮತದಾರರು ಬ್ರೇಕ್ ಹಾಕಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಳ ಒಪ್ಪಂದಗಳ ಮೂಲಕ ಗೆಲುವು ಸಾಧಿಸುತ್ತಿದ್ದ ಹೊರಟ್ಟಿಯವರ ಕಾಲ ಮುಗಿದಂತೆ ಎಂದರು. ನೀಲಪ್ಪ ಹತ್ತಿ, ಮಂಜುನಾಥ ಮಾಗಡಿ ಇತರರಿದ್ದರು.
--
ವಸತಿ ನಿಲಯ ಮಂಜೂರು: ಗುಂಜಿಕರ
ಗಜೇಂದ್ರಗಡ: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ರೋಣ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕುಗಳಲ್ಲಿ ತಲಾ 1ರಂತೆ ಅಲ್ಪಸಂಖ್ಯಾತ ಬಾಲಕ, ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯಗಳು ಮಂಜೂರಾಗಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರವಿ ಗುಂಜಿಕರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಮಾಹಿತಿ ನೀಡಿದರು. ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ವಿನೂತನ ಯೋಜನೆಗಳನ್ನು ಜಾರಿಗೊಳಿಸಿವೆ. ಅಲ್ಪಸಂಖ್ಯಾತರ ಮುಸ್ಲಿಂ ವಿಚ್ಛೇದಿತ, ವಿಧವೆ, ವಯೋವುತಿ ಮೀರಿದ ಹಾಗೂ ಬಡತನ ರೇಖೆಗಿಂತ ಕೆಳಗಿನ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಧಿಭಾಗ್ಯ ಯೋಜನೆಯಡಿ ರು. 50 ಸಾವಿರ ನೀಡಲಾಗುತ್ತಿದೆ. 13-14 ರಲ್ಲಿ ಜಿಲ್ಲೆಯ 46 ಫಲಾನುಭವಿಗಳಿಗೆ ಸಹಾಯ ಧನ ನೀಡಲಾಗಿದೆ. ಅದರಂತೆ ಪ್ರಸಕ್ತ ವರ್ಷದಲ್ಲಿ 65 ಫಲಾನುಭವಿಗಳಿಗೆ ಸಹಾಯ ಧನ ನೀಡುವ ಗುರಿ ಹೊಂದಲಾಗಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಹೋಬಳಿ ಮಟ್ಟಕ್ಕೆ 25, ತಾಲೂಕು ರು. 50 ಲಕ್ಷ ಹಾಗೂ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುವ ಶಾದಿ ಮಹಲ್‌ಗೆ ರು. 1 ಕೋಟಿ ಸಹಾಯ ಧನ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ 17 ಶಾದಿ ಮಹಲ್‌ಗಳು ನಿರ್ಮಾಣಗೊಂಡಿವೆ. ಜತೆಗೆ ಗಜೇಂದ್ರಗಡ ಪಟ್ಟಣದ ಶಾದಿ ಮಹಲ್ ಸೇರಿ 4 ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿವೆ. ಪ್ರತಿ ವರ್ಷ ಅಲ್ಪಸಂಖ್ಯಾತರ ಪ್ರತಿಭಾನ್ವಿತಿ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜತೆಗೆ 7ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯ ಜತೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ವಿಶೇಷ ಬೋಧನಾ ಕಾರ್ಯಕ್ರಮ ಜಾರಿಯಲ್ಲಿದೆ. ಇದರ ಜತೆ ಐಟಿಐ, ಡಿಪ್ಲೋಮಾ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
--
ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಸಮುದಾಯ ಮುಂದಾಗಲಿ
ಗಜೇಂದ್ರಗಡ: ಸೊಳ್ಳೆಗಳಿಂದ ಹರಡಬಹುದಾದ ಭಯಾನಕ ಸಾಂಕ್ರಾಮಿಕ ರೋಗಗಳಲ್ಲಿ ಮಲೇರಿಯಾ ಕೂಡಾ ಒಂದು. ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ಸಮುದಾಯ ಮುಂದಾಗಬೇಕು. ಇದರಿಂದ ಸಾಂಕ್ರಾಮಿಕ ಕಾಯಿಲೆ ನಿಯಂತ್ರಿಸಬಹುದು ಎಂದು ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅಶ್ವಿನಿ ಕೊಪ್ಪದ ಹೇಳಿದರು. ಸಮೀಪದ ಗೋಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಶಾಂತಗಿರಿ ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಲೇರಿಯಾ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿ. ಇದಕ್ಕೆ ಪರೋಪ ಜೀವಿ ಎಂದು ಕರೆಯಲಾಗುತ್ತದೆ. ಸೂಕ್ಷ್ಮ ದರ್ಶಕದಿಂದ ಮಾತ್ರ ಇದನ್ನು ನೋಡಲು ಸಾಧ್ಯ. ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ನಾವು ವಾಸಿಸುವ ಪರಿಸರ ಸ್ವಚ್ಛವಾಗಿರುವ ಜತೆ ನೈರ್ಮಲ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು. ಆರ್.ವಿ. ಕೊಪ್ಪದ ಮಾತನಾಡಿದರು. ಮಲೇರಿಯಾ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ರಾಜೇಶ್ವರಿ ಬಡಿಗೇರ ಪ್ರಥಮ, ಗಂಗಾ ಮೆಣಸಿನಕಾಯಿ ದ್ವಿತೀಯ ಹಾಗೂ ಬಸಮ್ಮ ಹದ್ದನ್ಣವರ ತೃತೀಯ ಸ್ಥಾನ ಪಡೆದಿದ್ದಾರೆ. ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ಬಗ್ಗೆ ಮುಂಜಾಗೃತಾ ಕ್ರಮಗಳ ಕುರಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಸಹಾಯಕ ಐ.ಎಸ್. ರಂಜಣಗಿ, ಜಯಶ್ರೀ ಕೊತಬಾಳ, ಜಿ.ಎನ್. ವೈದ್ಯ, ಕೃಷ್ಣಾ ಕುಲಕರ್ಣಿ, ಸಂಗೀತಾ ನೆಲ್ಲಿಕೊಪ್ಪ, ಕೆ.ಎ. ಬೂದಿಹಾಳ ಉಪಸ್ಥಿತರಿದ್ದರು.
ಎಸ್.ವಿ. ಸಂಕನೂರ ಗೆಲವು: ಬಿಜೆಪಿ ಸಂಭ್ರಮ
ಶಿರಹಟ್ಟಿ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಾ. ಎಸ್.ವಿ. ಸಂಕನೂರ ಗೆಲವು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತ ಬಳಿ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಬಿಜೆಪಿ ಎಸ್ಟಿ ಘಟಕದ ಅಧ್ಯಕ್ಷ ಜಾನು ಲಮಾಣಿ ಮಾತನಾಡಿ, ಕಾರ್ಯಕರ್ತರ ಸಂಘಟನೆ, ಪರಿಶ್ರಮ ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿಗೆ ತಂದ ಜನಪರ ಯೋಜನೆಗಳು, ನರೇಂದ್ರ ಮೋದಿ ಅಲೆ, ಪಕ್ಷದ ತತ್ವ ಸಿದ್ಧಾಂತ ಹಾಗೂ ಹಿಂದಿನ ಕೇಂದ್ರ ಯುಪಿಎ ಸರ್ಕಾರದ ದುರಾಡಳಿತವೇ ಬಿಜೆಪಿ ಹಾಗೂ ಸಂಕನೂರ ಗೆಲವಿಗೆ ಕಾರಣ ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಯಲ್ಲಪ್ಪ ಇಂಗಳಗಿ, ಶಿದ್ರಾಮಯ್ಯ ಹಾವೇರಿಮಠ, ಎಸ್.ಬಿ. ಕೋರಿಶೆಟ್ಟರ್, ಶಶಿಧರ ರಾನಡೆ, ಶಶಿಧರ ಮಣ್ಣೂರ, ಆನಂದ ಸೊರಟೂರ, ತಿಪ್ಪಣ್ಣ ಲಮಾಣಿ, ಎಸ್.ಪಿ. ಪೂಜಾರ, ನಿಂಗಪ್ಪ ಲಮಾಣಿ, ಮಲ್ಲೇಶ ಲಮಾಣಿ, ಲೋಕನಾಥ ಲಮಾಣಿ, ನೀಲಪ್ಪ ಲಮಾಣಿ, ಶಿವಪುತ್ರಪ್ಪ ಹತ್ತಿಕೋಟಿ, ಶಫಿ ಹೆಸರೂರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement