ಸುಗಮ ಸಂಚಾರಕ್ಕೆ ಸಹಕರಿಸಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 26
ಪಟ್ಟಣದಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸುಗಮ ಸಂಚಾರಕ್ಕೆ ಅನುಕೂಲಕ್ಕಾಗಿ ಕೈಗೊಳ್ಳುವ ಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪಟ್ಟಣದಲ್ಲಿ ಸುಗಮ ಸಂಚಾರ ಕುರಿತು ಏರ್ಪಡಿಸಿದ್ದ ವ್ಯಾಪಾರಸ್ಥರು, ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸಿಪಿಐ ಶ್ರೀನಿವಾಸ ಮೇಟಿ ಹಾಗೂ ಪಿಎಸ್ಐ ವಿಕಾಸ್ ಎಲ್. ಮಾತನಾಡಿ, ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ವತಿಯಿಂದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಪಟ್ಟಣದಲ್ಲಿ ಈ ಕ್ರಮವು ಜು. 2ರಿಂದ ಪ್ರಾರಂಭವಾಗಲಿದ್ದು, ಜು. 10ರಿಂದ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ಪಟ್ಟಣದ ಶಿಗ್ಲಿ ನಾಕಾದಿಂದ ದೂದನಾನಾ ದರ್ಗಾವರೆಗೆ ರಸ್ತೆಯ ಎರಡು ಬದಿಗಳಲ್ಲಿ ಪ್ರತಿದಿನ ಒಂದು ಬದಿಯಂತೆ ಪಾರ್ಕಿಂಗ್ ವ್ಯವಸ್ಥೆ, ಪಾದಗಟ್ಟಿಯಿಂದ ಹನುಮಂತ ದೇವರಗುಡಿವರೆಗೆ ಏಕಮುಖ ಸಂಚಾರ ವ್ಯವಸ್ಥೆ, ಫುಟ್ಪಾತ್ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲು ಅತಿಕ್ರಮಣ ತೆರವುಗೊಳಿಸುವುದು. ಭಾರಿ ವಾಹನಗಳು ಸರಕುಗಳನ್ನು ತೆರವುಗೊಳಿಸುವುದು. ಅತಿಕ್ರಮಣ ಮಾಡಿರುವ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ತೆರವುಗೊಳಿಸಿ ಸಹಕರಿಸುವುದು ಅಗತ್ಯವಾಗಿದೆ ಎಂದರು.
ಫುಟ್ಪಾತ್ ಅಳತೆಯನ್ನು ಸರಿಯಾಗಿ ಗುರುತಿಸುವ ಕಾರ್ಯವನ್ನು ಪುರಸಭೆ ಶೀಘ್ರ ಮಾಡಿ ಅವುಗಳನ್ನು ತೆರವುಗೊಳಿಸಲು ಸೂಚಿಸಬೇಕು. ಸಾರ್ವಜನಿಕರು, ಮುಖಂಡರು ಈ ಕಾರ್ಯಕ್ಕೆ ಸಹಕಾರ ಸಲಹೆಗಳನ್ನು ನೀಡುವ ಮೂಲಕ ಯಶಸ್ವಿಗೊಳಿಸಬೇಕು. ಆಟೋ ಚಾಲಕರು ಸಮವಸ್ತ್ರ ಕಡ್ಡಾಯ, ಹೆಚ್ಚಿನ ದರ ವಸೂಲಿ ಮಾಡದಿರುವುದು ಮತ್ತು ಟೆಂಪೋ ಇನ್ನಿತರ ವಾಹನಗಳ ಮೇಲೆ ಟಾಪ್ ಸರ್ವೀಸ್ ನಿಷೇಧ ಮಾಡುವುದು ಸೇರಿದಂತೆ ಅನೇಕ ವಿಷಯಗಳನ್ನು ಕುರಿತು ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಮಾಜಿ ಅಧ್ಯಕ್ಷರಾದ ಎನ್.ಜಿ. ಹೊಂಬಳ, ವಿ.ಜಿ. ಪಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಮ್ಯಾಗೇರಿ, ಸದಸ್ಯರಾದ ಮಹೇಶ ಹೊಗೆಸೊಪ್ಪಿನ, ರಾಜಣ್ಣ ಕುಂಬಿ, ರಾಮಣ್ಣ ರಿತ್ತಿ, ನಾಗಪ್ಪ ಓಂಕಾರಿ, ಶಂಕ್ರಮ್ಮ ಕರಡಿ, ಬಸವರಾಜ ಓದುನವರ, ಕಿರಣ ನವಲೆ, ವ್ಯಾಪಾರಸ್ಥರಾದ ಎಂ.ಎಂ. ಅಗಡಿ, ಆರ್.ಸಿ. ಬಾಳಿಹಳ್ಳಿಮಠ, ಬಸವೇಶ ಮಹಾಂತಶೆಟ್ಟರ, ಆಟೋ, ಟೆಂಪೋ ಮಾಲೀಕರು ಅನೇಕ ಸಾರ್ವಜನಿಕರು ಹಾಜರಿದ್ದರು.