ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಲ್ಲ ಕಡೆ ಕಸ, ರಸ್ತೆ ಮೇಲೆ ಗಲೀಜು

Lingaraj Badiger
Updated On : 28 Jun 2014, 10:31 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 27
ಎಲ್ಲೆಂದರಲ್ಲಿ ಕಸದ ರಾಶಿ, ಚರಂಡಿ, ರಸ್ತೆ ಮೇಲೆಲ್ಲಾ ಗಲೀಜು. ಹೌದು, ಇದು ಗಜೇಂದ್ರಗಡ ದರ್ಶನ.
ಪಟ್ಟಣದಲ್ಲಿ ಕೇಳುವವರಿಲ್ಲದಂತಾಗಿ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸ್ಥಳೀಯ ಆಡಳಿತ ಚುಕ್ಕಾಣಿ ಹಿಡಿದು ವರ್ಷ ಕಳೆದರೂ ಪಟ್ಟಣದ 23 ವಾರ್ಡ್‌ಗಳಲ್ಲಿ ಕನಿಷ್ಠ ಸೌಲಭ್ಯ ದೊರಕಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ ಭರವಸೆ ಹುಸಿಯಾಗಿದೆ. ಕೇವಲ ಅಧಿಕಾರದ ವ್ಯಾಮೋಹಕ್ಕೆ ಸಿಲುಕಿರುವ ಪುರಸಭಾ ಆಡಳಿತದ ಬಗೆಗೆ ಜನರಲ್ಲಿ ಅನುಮಾನಗಳು ಕಾಡಲಾರಂಭಿಸಿವೆ.  ಇಲಾಖೆ ನಿರ್ದೇಶನಗಳನ್ನು ಗಾಳಿಗೆ ತೂರಿ ಕೇವಲ ಹಣ ಕೊಟ್ಟವರಿಗೆ ಸೌಕರ್ಯ ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳು ಅಲೆದು ಬಸವಳಿದಿದ್ದಾರೆ.
ಜನತೆಗೆ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಆಡಳಿತ ಸೇವೆ ಎನ್ನುವುದು ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಗಗನ ಕುಸುಮವಾಗಿದೆ. ಕಾನೂನಿನ ಇತಿಮಿತಿಯಲ್ಲಿ ಆದ್ಯತೆ ಮೇರೆಗೆ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಮಾಡುವರು ಯಾರೂ ಇಲ್ಲದಂತಾಗಿದೆ ಎಂದು ಜನತೆ ದೂರಿದ್ದಾರೆ.
ಅಭಿವೃದ್ಧಿ ಬೇಕಾಗಿಲ್ಲ
ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ ಕೋಟ್ಯಂತರ ರುಪಾಯಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯತನದಿಂದ ಪೋಲಾಗುತ್ತಿದೆ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಶಿವರಾಜ ಘೋರ್ಪಡೆ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಆಡಳಿತಕ್ಕೆ ಪಟ್ಟಣದ ಅಭಿವೃದ್ಧಿಬೇಕಾಗಿಲ್ಲ ಎಂದು ದೂರಿದರು. ಸರ್ಕಾರ ಪಟ್ಟಣದ ಅಭಿವೃದ್ಧಿ, ಶುಚಿತ್ವ ಕಾಪಾಡಲು ಹಾಗೂ ನಾಗರಿಕರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಕೋಟ್ಯಂತರ ವೆಚ್ಚ ಮಾಡುತ್ತಿದೆ. ಆದರೆ, ಯೋಜನೆಗಳ ಫಲ ವಾಸ್ತವವಾಗಿ ಜನತೆಗೆ ತಲುಪಿಲ್ಲ ಎಂಬುದಕ್ಕೆ ಪಟ್ಟಣದ ಚಿತ್ರಣವೇ ಸಾಕ್ಷಿಯಾಗಿದೆ. ರಸ್ತೆಯಲ್ಲಿ ಹರಿಯುವ ಗಲೀಜು ನೀರಿನಿಂದ ಪ್ರಮುಖ ವಾಣಿಜ್ಯ ಮಾರುಕಟ್ಟೆಯಲ್ಲಿ ಜನ ಮೂಗು ಮುಚ್ಚಿಕೊಂಡು ನಡೆದಾಡುವ ದುಸ್ಥಿತಿ ಬಂದೊದಗಿದೆ. ಇಷ್ಟಾದರೂ ಪುರಸಭೆ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ.
- ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement