ಜಿಲ್ಲೆಗೆ ಮತ್ತೆ ವಕ್ಕರಿಸಿದ ಡೆಂಘೀ
ಕನ್ನಡಪ್ರಭ ವಾರ್ತೆ, ಗದಗ, ಜೂ. 27
ಜಿಲ್ಲೆಯ ಗ್ರಾಮಗಳು ಹಾಗೂ ಗದಗ- ಬೆಟಗೇರಿ ಅವಳಿ ನಗರದಲ್ಲಿ ಜ್ವರದಿಂದ ನಿತ್ಯವೂ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಒಮ್ಮೆಲೇ ಜ್ವರ ಕಾಣಿಸಿಕೊಳ್ಳುವುದರಿಂದ ಜಿಲ್ಲೆಗೆ ಮತ್ತೆ ಡೆಂಘೀ ವಕ್ಕರಿಸಿದೆಯೇ ಎಂಬ ಸಾರ್ವಜನಿಕರ ಅನುಮಾನ ನಿಜವಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ಗದಗ- ಬೆಟಗೇರಿಯಲ್ಲಿ ಸ್ವಚ್ಛತೆ ಕೊರತೆ ಇದೆ. ಅವಳಿ ನಗರದ ಕೊಳಕು ಕಾಯಿಲೆಗಳು ಹೆಚ್ಚಾಗಲು ಹೇಳಿ ಮಾಡಿಸಿದಂತಿದೆ. 20 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಅಷ್ಟು ದಿನ ನೀರು ಸಂಗ್ರಹಿಸಿಟ್ಟರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ ಎಂಬುದು ಸಾರ್ವಜನಿಕರಿಗೆ ಖಾತ್ರಿಯಾಗಿದ್ದರೂ ಪರ್ಯಾಯ ವ್ಯವಸ್ಥೆ ಇಲ್ಲ.
ಗ್ರಾಮಗಳಲ್ಲೂ ಹೆಚ್ಚಳ
ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದ 25ಕ್ಕೂ ಹೆಚ್ಚು ಜನರು ತೀವ್ರ ಜ್ವರದಿಂದ ಆಸ್ಪತ್ರೆ ಸೇರಿದ್ದು, ಅವರ ರಕ್ತದ ಮಾದರಿಗಳನ್ನು ಪಡೆಯಲಾಗಿದೆ. ಹಲವರಿಗೆ ಕಲುಷಿತ ನೀರು ಸೇವನೆಯಿಂದ ಬರುವ ಟೈಫಾಯಿಡ್ ಕಾಣಿಸಿಕೊಂಡರೆ ಕೆಲವರಿಗೆ ಚಿಕೂನ್‌ಗುನ್ಯಾ ಪತ್ತೆಯಾಗಿದೆ.
ಅವಳಿ ನಗರದಲ್ಲಿ 30 ಪ್ರಕರಣಗಳು
ಗದಗ-ಬೆಟಗೇರಿ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚಿನ ಜನರು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಬೆಟಗೇರಿ ಭಾಗದ ಮೂವರನ್ನು (ಒಂದು ಮಗು ಸೇರಿ) ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಕಳುಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರಕಾರ ಮೂವರಲ್ಲಿ ಶಂಕಿತಡೆಂಘೀ ಕಂಡು ಬಂದ ಹಿನ್ನೆಲೆಯಲ್ಲಿಯೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಇನ್ನುಳಿದವರಲ್ಲಿ ಮಲೇರಿಯಾ ಹಾಗೂ ಸಹಜ ಜ್ವರದ ಬಾಧೆ ಕಾಣಿಸಿಕೊಂಡಿದೆ ಎನ್ನುತ್ತಾರೆ.
ಖಚಿತಪಡಿಸಿದ ವೈದ್ಯರು
ಆರೋಗ್ಯ ಇಲಾಖೆ ಮಾಹಿತಿ ಆಧಾರದಲ್ಲಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚಿನ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಕೆಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, ಮತ್ತೆ ಕೆಲವರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವೆಡೆ ಮಲೇರಿಯಾ, ಮತ್ತೆ ಕೆಲವು ಗ್ರಾಮಗಳಲ್ಲಿ ಚಿಕೂನ್‌ಗುನ್ಯಾ ಕಾಯಿಲೆ ಕಾಣಿಸಿಕೊಂಡಿರುವುದು ರಕ್ತ ತಪಾಸಣೆಯ ವೇಳೆಯಲ್ಲಿ ಪತ್ತೆಯಾಗಿದೆ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವವರಲ್ಲಿ ಹೆಚ್ಚಿನ ಸಂಖ್ಯೆಯವರು ಜ್ವರದ ಬಾಧೆಯಿಂದಲೇ ಎನ್ನುವುದನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಖಚಿತ ಪಡಿಸುತ್ತಾರೆ.
-ಶಿವಕುಮಾರ ಕುಷ್ಟಗಿ