ಪತಿ ಮನೆ ಕೊಡಿಸಿ: ಲೋಕಾಯುಕ್ತಗೆ ವೃದ್ಧೆ ದೂರು
ಕನ್ನಡಪ್ರಭ ವಾರ್ತೆ, ರೋಣ, ಜೂ. 27
ನನ್ನ ಪತಿ ಹೆಸರಿನಲ್ಲಿದ್ದ ಮನೆಯನ್ನು ಮೈದುನನ ಮಕ್ಕಳು ತಮ್ಮ ಹೆಸರಿಗೆ ನೋಂದಾಸಿಕೊಂಡಿದ್ದಾರೆ. ದಯವಿಟ್ಟು ನನ್ನ ಮನೆಯನ್ನು ನನಗೆ ಕೊಡಿಸಿ ಎಂದು ತಾಲೂಕಿನ ಗಜೇಂದ್ರಗಡದ ಗೊಲ್ಲರಗಲ್ಲಿ ವೃದ್ಧೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾಳೆ.
ಜೈಮಿನಿಷಾ ಮೋಮಿನ ಗುರುವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ ಗದಗ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಲ್ಲಿ ದೂರು ಸಲ್ಲಿಸಿದರು.
ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ಗೊಲ್ಲರ ಗಲ್ಲಿಯ ಆಸ್ತಿ ನಂಬರ್ 252 ಮನೆ ನನ್ನ ಪತಿ ಹೆಸರಿನಲ್ಲಿಯೇ ಇದೆ. ಆದರೆ ಈಗ ಏಕಾಏಕಿ ನನ್ನ ಮೈದುನನ ಮಗ (ರಿಜ್ವಾನ್ ಅಹ್ಮದ್ ಪುತ್ರ ಅಸ್ಲಾಂಸಾಬ ಮೋಮಿನ್) ನೆ, ನಿನ್ನ ಗಂಡ ನಮ್ಮ ಹೆಸರಿಗೆ ಮನೆ ಬರೆದು ಕೊಟ್ಟಿದ್ದಾನೆ. ಕೂಡಲೇ ಮನೆ ಖಾಲಿ ಮಾಡು ಎಂದು ಬೆದರಿಸುತ್ತಿದ್ದಾರೆ. ನನಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ, ಶಕ್ತಿ ಕಡಿಮೆಯಾಗಿದೆ. ಈಗ ದಿಢೀರ್ ಹೋಗು ಅಂದರೆ ಎಲ್ಲಿ ಹೋಗಲಿ. ನನ್ನ ಗಂಡ ಸತ್ತ ಮೇಲೆ ಸುಳ್ಳು ಕಾಗದ ಸೃಷ್ಟಿಸಿ ನನಗೆ ಮನೆ ಸಿಗದಂತೆ ಮಾಡಿದ್ದಾರೆ. ದಯವಿಟ್ಟು ನನ್ನ ಮನೆಯನ್ನು ನನಗೆ ಸಿಗುವಂತೆ ಮಾಡಿ ಎಂದು ವೃದ್ಧೆ ಲೋಕಾಯುಕ್ತರಲ್ಲಿ ಕಣ್ಣೀರಿಟ್ಟಳು.
ಲೋಕಾಯುಕ್ತ ಸಿಪಿಐ ರವಿ ಪುರುಷೋತ್ತಮ ಮಾತನಾಡಿ, ನಿಮ್ಮ ಬೇಡಿಕೆಯು ನ್ಯಾಯಯುತವಾಗಿ ಕಂಡು ಬರುತ್ತದೆ. ಈ ಕುರಿತು ಗಜೇಂದ್ರಗಡ ಪುರಸಭೆಯ ಮುಖ್ಯಾಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಗುವದು. ಪತಿ ನಿಧನವಾದ ಬಳಿಕ ಅವನ ಆಸ್ತಿಗೆ ನೀನೇ ಸಂಪೂರ್ಣ ವಾರಸುದಾರಳು. ನಿಮಗೆ ನ್ಯಾಯ ದೊರಕಿಸಿಕೊಡುವಲ್ಲಿ ಮಾನವೀಯ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.