ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ತರಾಟೆ
ಮುಂಡರಗಿ: ಪುರಸಭೆಯಲ್ಲಿ ಎಷ್ಟು ಕಸದ ಗಾಡಿ, ಟ್ರ್ಯಾಕ್ಟರ್ ಅದಾವು, ದಿನಕ್ಕೆ ಅವುಗಳಿಗೆ ಎಷ್ಟು ಡೀಸೆಲ್ ಹಾಕುತ್ತೀರಿ, ಲೆಕ್ಕ ಕೊಡಬೇಕು. ನಾವು ನಿಮ್ಮನ್ನ ಲೆಕ್ಕ ಕೇಳಿದ್ರ ನೀವು ನಮ್ಮೊಳಗೆ ಜಗಳ ಹಚ್ಚಿ ಮೋಜು ನೋಡುತ್ತೀರಿ. ನಾವು 23 ಸದಸ್ಯರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಿರುಕು ಮೂಡಿಸಬೇಡಿ ಮುಖ್ಯಾಧಿಕಾರಿಯನ್ನು ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಪ್ರಭು ಅಬ್ಬಿಗೇರಿ ತರಾಟೆಗೆ ತೆಗೆದುಕೊಂಡರು.
ಅವರು ಶನಿವಾರ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದರು. ನಾವು ಏನರ್ ಕೇಳಿದ್ರ ಸದಸ್ಯರು ನಮ್ಮ ವಿರುದ್ಧ ಮಾತಾಡೂವಂಗ ಮಾಡತಾರ್. ಊರಾಗ ಎಲ್ಲೆಂದರಲ್ಲಿ ಕಸ ಹೆಚ್ಚಾಗಿ ಬರಾಕತ್ತೈತಿ, ಪತ್ರಕರ್ತರು ಪೇಪರ್ನ್ಯಾಗ ಬರದ್ರೂ ನೀವು ಸ್ವಚ್ಛ ಮಾಡಿಸುವುದಾಗಲಿ ಅತ್ತಕಡೆಗೆ ತಿರುಗಿಯೂ ನೋಡುವುದಿಲ್ಲ, ನಮಗ ಮತ ಹಾಕಿದ ಜನರಿಗೆ ನಾವು ಏನ್ ಉತ್ತರ ಹೇಳಬೇಕ್ರಿ ಎಂದು ಶಾಸಕರನ್ನು ಪ್ರಶ್ನಿಸಿದರು. ಈ ಕೂಡಲೇ ನಿತ್ಯ ವಾಹನಗಳಿಗೆ ಹಾಕುವ ಡೀಸೆಲ್ ಹಾಗೂ ಇತರೆ ಮಾಹಿತಿಗಳನ್ನು ನೀಡಿರಿ ಎಂದು ಸಭೆಯಲ್ಲಿದ್ದ ಶಾಸಕ ರಾಮಕೃಷ್ಣ ದೊಡ್ಡಮನಿ ಮುಖ್ಯಾಧಿಕಾರಿಗೆ ತಿಳಿಸಿದರು. ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ಪುರಸಭೆಯಲ್ಲಿ ಯಾವಾಗ ಬಂದು ನೋಡಿದರೂ ಕೆಲಸ ಮಾಡುವ ಅಧಿಕಾರಿಗಳೇ ಇರುವುದಿಲ್ಲ. ಬೆಳಗ್ಗೆ 11 ಗಂಟೆ, 12 ಗಂಟೆಗೆ ಬಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಕಚೇರಿಯಲ್ಲಿ ಯಾರೂ ಇರುವುದಿಲ್ಲ. ಶಾಸಕರು, ಮುಖ್ಯಾಧಿಕಾರಿ ಹಾಗೂ ಪುರಸಭೆ ಅಧ್ಯಕ್ಷರು ಇಂಥ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅದರಂತೆ ಸಾರ್ವಜನಿಕರು ಉತಾರ ಕೇಳಿದರೆ 4 ದಿನ, 8 ದಿನ, 15 ದಿನ ಬಿಟ್ಟು ಬನ್ನಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದರು. ಇದಕ್ಕೆ ಶಾಸಕ ದೊಡ್ಡಮನಿ, ಮುಖ್ಯಾಧಿಕಾರಿ ಸುಣಗಾರ ಮಾತನಾಡಿ, ಸರಿಯಾಗಿ ಕಚೇರಿಗೆ ಬರದೇ ಇರುವವರಿಗೆ ಈ ಕೂಡಲೇ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಪುರಸಭೆಯ ಎಲ್ಲ ಸದಸ್ಯರೂ ಕುಳಿತು ಸಭೆ ಸಮಾರಂಭ ನಡೆಸಲು ನಮಗೊಂದು ಕೊಠಡಿ ಕೊಡಿ ಎಂದು ಬಿಜೆಪಿ ಸಸದಸ್ಯರು ಪಟ್ಟು ಹಿಡಿದರು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೆ ಮಾಡಿಕೊಡಬಹುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ನಾವು ಹೇಳುವ ಮಾತಿಗೆ ಇಲ್ಲಿ ಬೆಲೆ ಇಲ್ಲವೆಂದಾದರೆ ನಾವೇಕೆ ಸಭೆಗೆ ಬರಬೇಕು ಎಂದು ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆಯುತ್ತಿದ್ದರು. ಅವರನ್ನು ಎಲ್ಲ ಸದಸ್ಯರು ತಡೆದಿದ್ದರಿಂದ ಮತ್ತೆ ಸಭೆಯಲ್ಲಿ ಕುಳಿತರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಪುರಸಭೆಗೆ ಅನುದಾನವನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಸರ್ಕಾರಕ್ಕೆ ಮರಳಿ ಹೋಗುತ್ತದೆ. ಆದ್ದರಿಂದ ಖರ್ಚು ಮಾಡುವಂತೆ ತಿಳಿಸಿದರು. ಪುರಸಭೆ ಅಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಸದಸ್ಯರಾದ ಕೊಟ್ರಮ್ಮ ಇಟಗಿ, ಫಕ್ರುದ್ದೀನ ಹಾರೋಗೇರಿ, ಚಂದ್ರಶೇಖರ ಬಡಿಗೇರ, ರಾಘವೇಂದ್ರ ಕುರಿ, ದಾನೇಶ್ವರಿ ಭಜಂತ್ರಿ, ರೇಖಾ ದೇಸಾಯಿ, ಸುರೇಶ ಮಾಳೆಕೊಪ್ಪ, ಲಿಂಗರಾಜಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಶಂಕರಗೌಡ ಪಾಟೀಲ ಇದ್ದರು.