ಲೋಬೋಸಾ ಕಂಪನಿ ಮಾನ್ಯತೆ ಪಡೆದಿದೆ: ಕಬಾಡಿ
ಗದಗ: ಲೋಬೋಸಾ ಫುಡ್ ಮತ್ತು ಬೆವರೇಜಿಸ್ ಕಂಪನಿ ಕೇಂದ್ರ ಸರ್ಕಾರದ ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಅಥಾರಟಿಯ ಮಾನ್ಯತೆ ಪಡೆದಿದೆ ಎಂದು ಕಂಪನಿಯ ನಿರ್ದೇಶಕ ಲೋಬೋಸಾ ಕಬಾಡಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ನಗರದಲ್ಲಿ ಲೋಬೋಸಾ ಮಿಕ್ಸಿಂಗ್ ಯುನಿಟ್ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಆಹಾರ ಭದ್ರತಾ ಇಲಾಖೆಯ ವತಿಯಿಂದ ಚಹಾ ಪುಡಿಯಲ್ಲಿ ನಿಯಮಿತ ಪ್ರಮಾಣದಲ್ಲಿ ಸನ್‌ಸೆಟ್ ಯಲ್ಲೊ ಬಣ್ಣ ಮಿಶ್ರಣಕ್ಕೆ ಪರವಾನಗಿ ಪಡೆದ ಅಧಿಕೃತ ಕಂಪನಿಯಾಗಿದೆ. ಈ ಕುರಿತು ಕಂಪನಿಯ ಹೆಸರಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ನಾವು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಅದು ಚಾಲ್ತಿಯಲ್ಲಿದೆ. ಕಂಪನಿಯ 42 ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು, ಅದರಲ್ಲಿ ಮಿಕ್ಸಿಂಗ್ ಘಟಕವೂ ಒಂದು, ಇಂದು ಮಾರುಕಟ್ಟೆಯಲ್ಲಿರುವ ಬೃಹತ್ ಮಲ್ಟಿ ನ್ಯಾಶನಲ್ ಕಂಪನಿಗಳು ಉತ್ತರ ಭಾರತದಲ್ಲಿ ಬೆಳೆದ ಚಹಾ ಎಲೆಗಳನ್ನು ತಮ್ಮ ಉತ್ಪನ್ನ ತಯಾರಿಕೆಗೆ ಬಳಕೆ ಮಾಡುತ್ತಾರೆ. ಅಲ್ಲಿನ ಭೂಮಿ ಗುಣಧರ್ಮ ಹಾಗೂ ಪರಿಸರದಿಂದ ಅಲ್ಲಿ ಬೆಳೆದ ಚಹಾ ಎಲೆಯಿಂದ ಉತ್ತಮ ಬಣ್ಣ ಬರುತ್ತದೆ. ಆದರೆ ನಮ್ಮ ಕಂಪನಿ ದಕ್ಷಿಣ ಭಾರತದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬೆಳೆದ ಎಲೆಗಳನ್ನು ಬಳಕೆ ಮಾಡುವುದರಿಂದ ಇಲ್ಲಿನ ಭೂಮಿಯ ಗುಣಧರ್ಮದ ಆಧಾರದಲ್ಲಿ ಈ ಚಹಾ ಎಲೆಗಳಿಂದ ಬಣ್ಣ ಕಡಿಮೆ ಬರುತ್ತದೆ ಎಂದರು.ನಾಗರಾಜ ಕಬಾಡಿ, ಮಂಜುನಾಥ ಕಬಾಡಿ, ದತ್ತು ಪವಾರ, ಕಾನೂನು ಸಲಹೆಗಾರ ಟಿ.ಎನ್. ಬಾಂಡಗೆ ಹಾಜರಿದ್ದರು.
ಪೊಲೀಸರ ಮೇಲೆ ಹಲ್ಲೆ: ಆರೋಪಿಗೆ ಶಿಕ್ಷೆ
ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯ 1 ವರ್ಷ 3 ತಿಂಗಳು ಸಾದಾ ಶಿಕ್ಷೆ ಹಾಗೂ ಒಂದು ಸಾವಿರ ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಕ್ಷ್ಮೇಶ್ವರದ ಎಂ.ಎ. ಕಾಲೇಜ್ ಹತ್ತಿರವಿರುವ ಚಹಾದ ಅಂಗಡಿ ಸಮೀಪದಲ್ಲಿ 2013ರ ಫೆ. 23ರಂದು ಓಡಿಶಾ ರಾಜ್ಯದ ರಾಯಗಡ ಜಿಲ್ಲೆಯ ನಿಷ್ಕಲ ಗ್ರಾಮದ ಕಾಶೀನಾಥ ಕೈಯಲ್ಲಿ ಬಡಿಗೆ ಹಿಡಿದುಕೊಂಡು, ರಸ್ತೆ ಮೇಲೆ ನಿಂತು ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದ. ಲಕ್ಷ್ಮೇಶ್ವರ ಠಾಣೆ ಸಿಬ್ಬಂದಿ ಮುರಿಗೆಪ್ಪ ಕರಿಗಾರ, ಆರ್.ಎಸ್. ವಾಲ್ಮೀಕಿ, ಸೋಮಪ್ಪ ದೊಡ್ಡಮನಿ ಹಾಗೂ ಅಲ್ಲಿದ್ದ ಜನರು ಅವನನ್ನು ಹಿಡಿಯುವಾಗ ಆರೋಪಿತನು ಬಡಿಗೆಯಿಂದ ಸಿಬ್ಬಂದಿ ಸೋಮಪ್ಪ ದೊಡ್ಡಮನಿ ಹಾಗೂ ಸ್ಥಳೀಯರಾದ ಬಸವನಗೌಡ ಮದ್ನೂರ ಅವರನ್ನು ಹೊಡೆದು ಮಾರಣಾಂತಿಕ ಗಾಯಪಡಿಸಿ, ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ಅಂಗಿ ಹಿಡಿದು ಜಗ್ಗಿ, ದೂಡಿದ್ದ. ಈ ಕುರಿತು ಅಪಾದನ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ ಕುಲಕರ್ಣಿ, ಆರೋಪಿತನಿಗೆ ಜೂ 16ರಂದು ಒಂದು ವರ್ಷ, 3 ತಿಂಗಳು ಸಾದಾ ಶಿಕ್ಷೆ ಹಾಗೂ ಒಂದು ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆಯನ್ನು ಹಾಗೂ ವಾದವನ್ನು ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಳ್ಳದ ಮಂಡಿಸಿದ್ದರು.
ಓವರ್ ಲೋಡ್ ಬಂದ್
ಗದಗ: ಜುಲೈ 1ರಿಂದ ಜಿಲ್ಲೆಯಾದ್ಯಂತ ಸರಕು ಸಾಗಾಣಿಕೆ ವಾಹನದಲ್ಲಿ ಓವರ್ ಲೋಡ್ ಪದ್ಧತಿಯನ್ನು ಬಂದ್ ಮಾಡಲಾಗಿದೆ. ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ಬೆಂಗಳೂರು ಇವರ ಸೂಚನೆ ಮೇರೆಗೆ ಗದಗ ಜಿಲ್ಲಾ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸಭೆ ಸೇರಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಬಿ. ಚುರ್ಚಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.