ಸಮರ್ಪಕ ವಿದ್ಯುತ್: ಮನವಿ
ಮುಂಡರಗಿ: ಪಟ್ಟಣ ಹಾಗೂ ತಾಲೂಕಿನಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಆಗುತ್ತಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ. ನೀರಾವರಿ ರೈತರಿಗೆ ಮಳೆಯೂ ಇಲ್ಲ ಮತ್ತು ವಿದ್ಯುತ್ತೂ ಇಲ್ಲವಾದರೆ ಬದುಕು ಚಿಂತಾಜನಕವಾಗುತ್ತದೆ. ಆದ್ದರಿಂದ ಸರಿಯಾಗಿ ವಿದ್ಯುತ್ ಒದಗಿಸುವಂತೆ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಂಗಾರು ಮಳೆ ಸಂಪೂರ್ಣ ವಿಫಲವಾಗಿರುವುದರಿಂದ ಬಿತ್ತಿದ ಬೆಳೆ ಒಣಗುತ್ತಿದೆ. ಅಲ್ಪ-ಸ್ವಲ್ಪ ನೀರಾವರಿ ಹೊಂದಿದ ರೈತರು ಬೆಳೆಗಳಿಗೆ ನೀರು ಹಾಯಿಸಿ ಬೆಳೆಗಳನ್ನು ಉಳಿಸಬೇಕೆಂದು ಪರದಾಡುತ್ತಿರುವಾಗ ವಿದ್ಯುತ್ ವ್ಯತ್ಯಯದಿಂದ ಅದೂ ಆಗುತ್ತಿಲ್ಲ. ಉತ್ತಮ ಗುಣಮಟ್ಟದ ಟಿ.ಸಿ. ಗಳನ್ನು ಅಳವಡಿಸಿ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಬೇಕು. ಅಕ್ರಮ-ಸಕ್ರಮದಲ್ಲಿ ಹಣ ತುಂಬಿದ ರೈತರಿಗೆ ಇಲ್ಲಿಯವರೆಗೆ ವಿದ್ಯುತ್ ಸೌಲಭ್ಯವನ್ನು ಎಷ್ಟು ರೈತರಿಗೆ ನೀಡಲಾಗಿದೆ ಎಂಬುದರ ಮಾಹಿತಿಯನ್ನು ವಾರದೊಳಗೆ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತರೊಂದಿಗೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.