ಮದ್ಯ ಮುಕ್ತರಾಗಿ: ಶ್ರೀ
ಶಿರಹಟ್ಟಿ: ಸಾರಾಯಿ ಕುಡಿತದಿಂದ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಸಮಾಜದ ವ್ಯವಸ್ಥೆ ಕಲುಷಿತಗೊಂಡಿದೆ. ಸಾರಾಯಿ ನಿಷೇಧಕ್ಕೆ ಎಲ್ಲ ಮಠಾಧೀಶರೇ ಸರ್ಕಾರಕ್ಕೆ ಒತ್ತಾಯ ತರಬೇಕು ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 670ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾರಾಯಿ ಕುಡಿತ ಇದೊಂದು ಸಾಮಾಜಿಕ ಪಿಡುಗು, ಇದನ್ನು ಹೋಗಲಾಡಿಸಲು ಎಲ್ಲರೂ ಪ್ರಯತ್ನಿಸಬೇಕು. ಅನೇಕ ಬಾರಿ ಸ್ವ-ಸಹಾಯ ಸಂಘದ ಮಹಿಳೆಯರು ಒಗ್ಗಟ್ಟಿನಿಂದ ಬೀದಿಗೆ ಬಂದು ಹೋರಾಟ ನಡೆಸಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಕುಡುಕರೇ ಹುಷಾರ್ ಒಲಿದರೆ ನಾರಿ, ಮುನಿದರೆ ಹೆಮ್ಮಾರಿ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದು ಕುಡುಕರಿಗೆ ಮನದಟ್ಟಾಗಿಲ್ಲ. ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಅಮಾಯಕ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳಿವೆ. ಲಂಗುಲಗಾಮಿಲ್ಲದೇ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಕೂಲಿನಾಲಿ ಮಾಡಿಕೊಂಡು ಬಂದ ಆದಾಯದಲ್ಲಿ ಹೊಟ್ಟೆ ತುಂಬಿಕೊಳ್ಳಲು ಖರೀದಿಸಿ ಮನೆಯಲ್ಲಿಟ್ಟ ಅಕ್ಕಿ ಇತರೇ ದವಸ ಧಾನ್ಯಗಳನ್ನು ಗಂಡಸರು ಮಾರಿಕೊಂಡು ಸಾರಾಯಿ ಕುಡಿಯುತ್ತಿರುವುದನ್ನು ಕೇಳಿದ್ದೇವೆ. ಈ ವ್ಯವಸ್ಥೆ ತಡೆದು ಮದ್ಯ ಮುಕ್ತರಾಗಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ಬಾಲೇಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಈ ದುಶ್ಚಟದಲ್ಲಿ ಬೀಳುತ್ತಿದ್ದಾರೆ. ಯುವಜನತೆ ಇದರಿಂದ ದೂರವಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪಗೌಡ, ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಶಿದ್ರಾಮಪ್ಪ ಮೊರಬದ, ಮಹೇಶ ಹಾರೋಗೇರಿ ಮಾತನಾಡಿದರು. ಗ್ರಾಪಂ ಸದಸ್ಯ ರಮೇಶ ನಿರ್ವಾಣಶೆಟ್ರ, ಕೊಟ್ರೇಶ ಸಜ್ಜನರ, ಎಪಿಎಂಸಿ ಸದಸ್ಯ ನಾಗರಾಜ ಅಕ್ಕೂರ, ಶಂಕ್ರಪ್ಪ ಗಾಂಜಿ, ಸಂಸ್ಥೆಯ ಗದಗ ವಿಭಾಗದ ನಿರ್ದೇಶಕ ಜಯಂತ ಪೂಜಾರ, ಬಿ.ಎಂ. ಯರಕದ, ಡಾ. ಎಸ್.ಎಫ್. ಮಠದ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಯೋಜನಾಧಿಕಾರಿ ದಿವಾಕರ ಕೆ. ಸ್ವಾಗತಿಸಿದರು. ಗಿರೀಶ ಕೋಡಬಾಳ ನಿರೂಪಿಸಿದರು. ಎಚ್.ಸಿ. ಕಿರಣ ವಂದಿಸಿದರು.