ಸಭೆ ಮಾಹಿತಿ ನೀಡದ ಅಧಿಕಾರಿಗಳು: ಛಬ್ಬಿ ಗ್ರಾಮಸ್ಥರ ಆರೋಪ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 2
ತಾಲೂಕಿನ ಛಬ್ಬಿ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸುವ ಕುರಿತು ಸರಿಯಾದ ಮಾಹಿತಿ ನೀಡದೇ ಶನಿವಾರ ಸಭೆ ನಡೆಸಲು ಆಗಮಿಸಿದ್ದ ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಹಾಗೂ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಸುತ್ತೋಲೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಗ್ರಾಮ, ಹೋಬಳಿ ಮಟ್ಟದಲ್ಲಿ ಪರಿಹರಿಸುವ ದೃಷ್ಟಿಯಿಂದ ಪ್ರತಿ ತಿಂಗಳ ಮೊದಲನೇ ಶನಿವಾರ ಜನಸ್ಪಂದನ ಸಭೆ ನಡೆಸಬೇಕೆಂದು ನಿರ್ದೇಶನವಿದ್ದರೂ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸಂಬಂಧಿಸಿದ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಧಿಕಾರಿಗೆ ಕಾರ್ಯಕ್ರಮ ನಡೆಸುವ ಕುರಿತು ಮಾಹಿತಿ ನೀಡಿ ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು. ಸಭೆ ಕುರಿತು ಗ್ರಾಮದಲ್ಲಿ ಡಂಗುರ ಸಾರಿಲ್ಲ. ಈ ಎಲ್ಲ ಅವ್ಯವಸ್ಥೆಗೆ ಮೂಲ ಕಾರಣ ತಹಸೀಲ್ದಾರ್ ಹಾಗೂ ಸಿಬ್ಬಂದಿ ವರ್ಗವೇ ಕಾರಣವಾಗಿದ್ದು, ಸಭೆ ನಡೆಸುವ ಬಗ್ಗೆ ಒಂದು ವಾರ ಮೊದಲೇ ನೋಟಿಸ್ ನೀಡಬೇಕೆಂದಿದ್ದರೂ ಗ್ರಾಮ ಪಂಚಾಯಿತಿ ಗಮನಕ್ಕೆ ತರದೇ ಇರುವುದರಿಂದ ಗ್ರಾಮಸ್ಥರಿಗೆ ಸಭೆ ನಡೆಯುವ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಯಾವುದೇ ಮಾಹಿತಿ ನೀಡದೇ ಸಭೆ ನಡೆಸಲು ಬಂದಿದ್ದು, ಬರೀ ಕಾಟಾಚಾರದ ಸಭೆ ಆಗುತ್ತದೆ. ಜನರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಆರೋಪಿಸಿದ ಗ್ರಾಪಂ ಸದಸ್ಯ ದೇವಪ್ಪ ಲಮಾಣಿ, ಮುಖಂಡ ಎಂ.ಎಸ್. ಪೋತರಾಜ ಅವರು, ಇದೇ ವ್ಯವಸ್ಥೆ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ವಿರೋಧದಿಂದಾಗಿ ಸಭೆಯನ್ನು ಮಾ.7ರಂದು ನಡೆಸಲು ತೀರ್ಮಾನಿಸಲಾಯಿತು. ಸಭೆಗೆ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಯಾವುದೇ ಸಬೂಬ ಹೇಳದೇ ಕಟ್ಟುನಿಟ್ಟಾಗಿ ಹಾಜರಿರುವಂತೆ ತಾಕೀತು ಮಾಡುವುದಾಗಿ ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ತಿಳಿಸಿದರು.