10ರೊಳಗೆ ಜೆಡಿಎಸ್ ಪಟ್ಟಿ ಬಿಡುಗಡೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 3
ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷವು ಸನ್ನದ್ಧವಾಗಿದ್ದು ಬರುವ ಮಾ. 10ರೊಳಗೆ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಹೇಳಿದರು.
ಅವರು ಸೋಮವಾರ ನಗರದ ಜಿಲ್ಲಾ ಜಿಡಿಎಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷವು ಸನ್ನದ್ಧವಾಗಿದ್ದು, ಪಕ್ಷದ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, 28 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯಲ್ಲಿ ಕೆಲವು ಆಂತರಿಕ ಸಮಸ್ಯೆಗಳಿರುವ ಕುರಿತು ಗಮನಕ್ಕೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಸಂಚರಿಸಿ, ಪಕ್ಷದಲ್ಲಿರುವ ಆಂತರಿಕ ಸಮಸ್ಯೆಗಳ ಪರಿಹರಿಸಿ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.
ತೃತೀಯ ರಂಗವು ಇಂದು ರಾಷ್ಟ್ರಮಟ್ಟದಲ್ಲಿ ಚೈತನ್ಯ ಕಂಡುಕೊಳ್ಳುತ್ತಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆ ಹೊಂದಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸುಮಾರು 18 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಈಗಾಗಲೇ ಜೆಡಿಎಸ್ 15 ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸಲಾಗಿದೆ. ಅಲ್ಲದೇ ಇನ್ನುಳಿದ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯನ್ನು ಈಗಾಗಲೇ ಪಕ್ಷದ ವರಿಷ್ಠರು ಸಿದ್ಧಗೊಳಿಸಿದ್ದು, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳಿಂದ ಪ್ರಮುಖ ನಾಯಕರು ಜೆಡಿಎಸ್ ಪಕ್ಷ ಸೇರ್ಪಡೆಗೆ ಆಸಕ್ತಿ ತೋರ್ಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಿದೆ ಎಂದು ಹೇಳಿದರು.
ಮೋದಿ ಗಾಳಿಪಟವಿದ್ದಂತೆ: ರಾಜ್ಯದಲ್ಲಿ ನರೇಂದ್ರ ಮೋದಿಯ ಗಾಳಿ ಬೀಸುತ್ತಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಬಿಜೆಪಿ ಪಕ್ಷದ ವರಿಷ್ಠರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮೋದಿ ಎನ್ನುವುದು ಕೇವಲ ಒಂದು ಗಾಳಿಪಟವಿದ್ದಂತೆ ಅದು ಬಾನಿನಲ್ಲಿ ಕೆಲಕಾಲ ಹಾರಾಡಬಹುದೇ ವಿನಃ ನಿರ್ದಿಷ್ಟ ಪ್ರದೇಶ ಹಾಗೂ ಗುರಿ ಹೊಂದಿಲ್ಲ. ಚುನಾವಣೆಯ ನಂತರ ಗಾಳಿಪಟದ ಸೂತ್ರ ಹರಿದು ಕೆಳಗೆ ಬಿದ್ದು ಹೋಗಲಿದೆ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕಿದೆ. ಈಗಾಗಲೇ ಮೋದಿಯ ಪ್ರಚಾರಕ್ಕೆ ಸಾವಿರಾರು ಕೋಟಿ ರು. ಖರ್ಚು ಮಾಡಲಾಗಿದೆ. ಈ ಪ್ರಚಾರಕ್ಕೆ ಬಿಜೆಪಿಯವರು ಎಲ್ಲಿಂದ ಅಷ್ಟೊಂದು ಹಣ ತಂದಿದ್ದಾರೆ ಎಂಬುದರ ಕುರಿತು ಮತದಾರರಿಗೆ ಲೆಕ್ಕಕೊಡಲಿ ಎಂದರು.
ಶೀಲಾ ನಾಯಕ, ಅಂಜಲಿ, ಮಂಗಲಾ, ಪುಷ್ಪಲತಾ ಮಾಡಲಗಿ, ಬಿ.ಎಸ್. ಹಿರೇಗೌಡ್ರ, ಅಂದಾನಯ್ಯ ಕುರ್ತಕೋಟಿಮಠ, ಹನುಮಂತಗೌಡ ಕಲ್ಮನಿ, ದಾವಲ್ ಮುಳಗುಂದ, ರಮೇಶ ಕಲಬುರ್ಗಿ, ಅಂಬಾಜಿ ದಹಿಂಡೆ, ಪ್ರಭುಗೌಡ ಪಾಟೀಲ, ಮಂಜುನಾಥ ರೋಣದ, ಜಾವೀದ ನೂರಭಾಷಾ ಸುದ್ದಿಗೋಷ್ಠಿಯಲ್ಲಿದ್ದರು.