ಗಂಗಾಮತ, ಅಂಬಿಗರನ್ನು ಎಸ್ಟಿಗೆ ಶಿಫಾರಸು ಸ್ವಾಗತಾರ್ಹ
ಗದಗ: ಗಂಗಾಮತ, ಅಂಬಿಗ, ಕೋಲಿ ಸೇರಿದಂತೆ 39 ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರಕ್ಕೆ ಸಮುದಾಯದ ಮುಖಂಡ ಡಾ. ಗಣೇಶ ಸುಲ್ತಾನಪುರ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದ್ದು, ತೀರಾ ಹಿಂದುಳಿದ ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ 3 ದಶಕಗಳಿಂದ ವಿವಿಧ ನಾಯಕರಾದ ದಿ. ಡಾ. ಆರ್.ವಿ. ಚೌಧರಿ, ಸಚಿವ ಬಾಬುರಾವ್ ಚಿಂಚನಸೂರ ಹಾಗೂ ಸಮಾಜದ ವಿವಿಧ ಮಠಾಧೀಶರು, ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಶ್ರೀಗಳು, ಶಾಂತ ಗಂಗಾಧರ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತ ಬಂದಿದೆ. ಕೆಲ ವರ್ಷಗಳ ಹಿಂದೆ ಹಿಂದುಳಿದ ಪ್ರವರ್ಗ (1)ರಲ್ಲಿ ಸೇರ್ಪಡೆಯಾಗಿತ್ತು. ಈಗ ಪರಿಶಿಷ್ಟ ಪಂಗಡಕ್ಕೆ ಸೇರುವ ಹಾದಿಯಲ್ಲಿದ್ದು, ಶೀಘ್ರ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ. ಮುನಿಯಪ್ಪ ಹಾಗೂ ಆಸ್ಕರ್ ಫರ್ನಾಂಡಿಸ್‌ಗೆ ಡಾ. ಸುಲ್ತಾನಪುರ ಒತ್ತಾಯಿಸಿದ್ದಾರೆ. ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಈ ಹಿಂದೆ ರಾಜ್ಯದ ವಿವಿಧೆಡೆ ಸಮಾವೇಶ ನಡೆಸಿದ್ದಾಗಿಯೂ ಸ್ಮರಿಸಿದ್ದಾರೆ. ಅಂಬಿಗರ ಚೌಡಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಜಾರಿಗೆ ತಂದಿರುವುದು ಮತ್ತು ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಡಾ. ಗಣೇಶ ಸುಲ್ತಾನಪುರ, ಐ.ಡಿ. ಸುಣಗಾರ, ಬೆಳ್ಳಿಕಟ್ಟಿ, ಲಕ್ಷ್ಮಣ ಬಾರಕೇರ, ಉಮೇಶ ಬಾರಕೇರ, ಶ್ರೀಧರ ಸುಲ್ತಾನಪುರ, ಗೋಡೆಣ್ಣವರ, ವಸಂತ ದೊಡ್ಡಮನಿ, ಸುಮಾ ಬಾರಕೇರ ತಿಳಿಸಿದ್ದಾರೆ.