ಮಾಗಡಿ ಕೆರೆ ಪ್ರೇಕ್ಷಣೀಯ ಸ್ಥಳ ಮಾಡಲು ಬದ್ಧ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 3
ತಾಲೂಕಿನ ಮಾಗಡಿ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಹಾಗೂ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಲು ಬದ್ಧ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಭಾನುವಾರ ಕೇಂದ್ರ ರಸ್ತೆ ನಿಧಿ ಅಡಿಯಲ್ಲಿ ರು. 5 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯವರು ಕೈಗೆತ್ತಿಕೊಂಡ ಶಿರಹಟ್ಟಿ-ಮಾಗಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಪ್ರತಿ ವಿಧಾನಸಭಾ ಮತಕ್ಷೇತ್ರದ 2 ಕೆರೆಗಳನ್ನು ಅಭಿವೃದ್ಧಿಪಡಿಸಿಲು ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಸದ್ಯ ಮಾಗಡಿ ಕೆರೆ ಅಭಿವೃದ್ಧಿಗೆ ರು. 2 ಕೋಟಿ ಅನುದಾನ ನೀಡಿದ್ದು, 134.15 ಎಕರೆ ವಿಸ್ತೀರ್ಣ ಹೊಂದಿರುವ ಮಾಗಡಿ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದ್ದು, ಪ್ರೇಕ್ಷಣೀಯ ಸ್ಥಳ (ಪಕ್ಷಿಧಾಮ)ವನ್ನಾಗಿ ಮಾಡಲು ಸಚಿವ ಆರ್.ವಿ. ದೇಶಪಾಂಡೆ ಅವರ ಗಮನಕ್ಕೂ ತರಲಾಗಿದೆ. ಮತ್ತೊಮ್ಮೆ ಕೆರೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು ಪ್ರವಾಸೋದ್ಯಮ ಇಲಾಖೆಯವರ ಗಮನಕ್ಕೂ ತರುವುದಾಗಿ ಭರವಸೆ ನೀಡಿದರು.
ಶಿರಹಟ್ಟಿ-ಮಾಗಡಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗುತ್ತಿದ್ದು, ರಸ್ತೆಯ ಅಕ್ಕಪಕ್ಕದ ಜನರು ತಕರಾರು ಮಾಡದೇ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು. ರಸ್ತೆ ಬಹಳ ಕಿರಿದಾಗಿದ್ದು, ವಾಹನ ಸಂಚಾರಕ್ಕೂ ಬಹಳ ತೊಂದರೆಯಾಗಿದೆ. ಸುಗಮ ಸಂಚಾರ ಹಾಗೂ ಅಪಘಾತಗಳನ್ನು ತಡೆಗಟ್ಟುವಲ್ಲಿ ರಸ್ತೆ ಅಗಲೀಕರಣ ಅಗತ್ಯವಾಗಿದ್ದು, ಸದ್ಯ 3.75 ಮೀಟರ್ ಅಗಲ ಅಳತೆ ಹೊಂದಿರುವ ರಸ್ತೆಯನ್ನು 5.5 ಮೀಟರ್ ಅಗಲಕ್ಕೆ ವಿಸ್ತರಣೆ ಮಾಡಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರು. 5 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಹಾಗೂ ರು. 2 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ಹಂತಹಂತವಾಗಿ ಗ್ರಾಮಕ್ಕೆ ಬೇಕಾಗುವ ಇತರೇ ಮೂಲ ಸೌಲಭ್ಯ ಒದಗಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ಮುಖಂಡ ಯು.ಎನ್. ಹೊಳಲಾಪುರ, ಮಹೇಂದ್ರ ಮುಂಡವಾಡ, ಗ್ರಾಪಂ ಅಧ್ಯಕ್ಷೆ ಲಲಿತವ್ವ ಬರಿಗಡಗಿ, ಸದಸ್ಯ ಮೈಲಾರಪ್ಪ ಹಾದಿಮನಿ, ವೀರಣ್ಣ ಮಠಪತಿ, ಲಕ್ಷ್ಮಣ ರೊಟ್ಟಿಗವಾಡ, ಫಕೀರೇಶ ಮ್ಯಾಟಣ್ಣವರ, ಶಾಂತಮ್ಮ ಬಾರಕೇರ, ಎಚ್.ಎಂ. ಕೃಷ್ಣಾರೆಡ್ಡಿ, ಎಲ್.ವೈ. ಮಾಳೋದೆ, ವೆಂಕರಡ್ಡಿ ಮೇಕಳಿ, ಶೇಖರಯ್ಯ ವಿಭೂತಿಮಠ, ಬಿ.ಟಿ. ರಡ್ಡಿ, ಪಿ.ಆರ್. ನಾಯಕ, ಬಾಬು ನಾಯಕ ಮುಂತಾದವರು ಉಪಸ್ಥಿತರಿದ್ದರು.