ರಸ್ತೆ ಸುಧಾರಣೆಗೆ ಚಾಲನೆ
ಮುಂಡರಗಿ: ತಾಲೂಕಿನ ವಿವಿಧ ಭಾಗಗಳಲ್ಲಿ ಡಾಂಬರ ರಸ್ತೆಗಳು ಕೆಲ ಪ್ರಮಾಣದಲ್ಲಿ ಹಾಳಾಗಿದ್ದು, ಅಂತಹ ರಸ್ತೆಗಳನ್ನು ಗುರುತಿಸಿ ಸಿಎಂಜಿಎಸ್‌ವೈ ಯೋಜನೆಯಡಿಯಲ್ಲಿ ಮರುಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಸೋಮವಾರ ತಾಲೂಕಿನ ಸಿಂಗಟಾಲೂರು ಗ್ರಾಮದ ಹತ್ತಿರ ಲೋಕೋಪಯೋಗಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ರು. 125 ಲಕ್ಷ ವೆಚ್ಚದಲ್ಲಿ ಕಲಕೇರಿ-ಗಂಗಾಪುರ ರಸ್ತೆ, ರು. 100 ಲಕ್ಷಗಳ ವೆಚ್ಚದಲ್ಲಿ ಕೊರ್ಲಹಳ್ಳಿ-ಹಮ್ಮಿಗಿ ರಸ್ತೆ ಸುಧಾರಣೆ, ರು. 125 ಲಕ್ಷಗಳ ವೆಚ್ಚದಲ್ಲಿ ಶಿರಹಟ್ಟಿ-ಮುಂಡರಗಿ ರಸ್ತೆಯಿಂದ ಮಲ್ಲಿಕಾರ್ಜುನಪುರ-ಕೆರಳ್ಳಿ ಕೂಡು ರಸ್ತೆ, ರು. 175 ಲಕ್ಷ ವೆಚ್ಚದಲ್ಲಿ ಕೊರ್ಲಹಳ್ಳಿ-ಹಮ್ಮಿಗಿ ರಸ್ತೆ ಸುಧಾರಣೆ ಕಾರ್ಯಕ್ರಮಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಲೋಕೋಪಯೋಗಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಪೆಂಡಿಕ್ಸ್ ಇ ಅಡಿಯಲ್ಲಿ ಅನೇಕ ಕಾಮಗಾರಗಳಿಗೆ ಚಾಲನೆ ಮಾಡುತ್ತಿದ್ದು, ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು. ಏಪ್ರಿಲ್‌ನಲ್ಲಿ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಇರುವುದರಿಂದ ರಸ್ತೆಯನ್ನು ತ್ವರಿತವಾಗಿ ಮಾಡಿ ಮುಗಿಸಬೇಕು ಎಂದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಗುತ್ತಿಗೆದಾರರಾದ ಕರಬಸಪ್ಪ ಹಂಚಿನಾಳ, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ಹೇಮಂತಗೌಡ ಪಾಟೀಲ, ಅನುಪ್‌ಕುಮಾರ ಹಂಚಿನಾಳ, ವಿ.ಟಿ. ಮೇಟಿ, ಶೇಖರಾಜ ಹೊಸಮನಿ, ಸೊಲಬಣ್ಣ ಜೋಬಾಳಿ, ಎ.ಪಿ. ದಂಡಿನ, ಲೋಕೋಪಯೋಗಿ ಇಲಾಖೆ ಎಚ್.ಬಿ. ಲಿಂಗರಡ್ಡಿ, ಎಚ್.ಬಸವರಾಜ, ನೀರಾವರಿ ಇಲಾಖೆಯ ಕೆಎಂಕೆ ಶರ್ಮಾ ಇದ್ದರು.