ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಡುಗೆ ಸಹಾಯಕಿಯರು, ಶಿಕ್ಷಕರು ಕಾರಣ

Mainashree
Updated On : 5 Mar 2014, 10:40 am

ರೋಣ: ತಾಲೂಕಿನ ಮಾರನಬಸರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ದೋಷಪೂರಿತ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮದ ಶಾಲೆಯಲ್ಲಿ ಅಸ್ವಸ್ಥ ಮಕ್ಕಳ ಪಾಲಕರ, ಎಸ್‌ಡಿಎಂಸಿ ಸದಸ್ಯರ ಹಾಗೂ ಶಿಕ್ಷಕರ ಸಭೆಯು ತಹಸೀಲ್ದಾರ್ ಎ.ಜಿ. ಪಂಡಿತ ನೇತೃತ್ವದಲ್ಲಿ ಜರುಗಿತು.
ಸಭೆಯಲ್ಲಿದ್ದ ಪಾಲಕರು, ಈ ಘಟನೆಗೆ ಮುಖ್ಯವಾಗಿ ಅಡುಗೆ ಸಹಾಯಕರು ಮತ್ತು ಮುಖ್ಯ ಶಿಕ್ಷಕರ ನಿಷ್ಕಾಳಜಿಗೆ ಪ್ರಮುಖವಾಗಿದೆ. ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಮುಖ್ಯಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಪಾಲಕರು ತಹಸೀಲ್ದಾರ್‌ಗೆ ಒತ್ತಾಯಿಸಿದರು.
ತಹಸೀಲ್ದಾರ್ ಎ.ಜಿ. ಪಂಡಿತ ಮಾತನಾಡಿ, ಈ ಘಟನೆ ಜರುಗಿದ್ದು ವಿಷಾದನೀಯ. ಮಕ್ಕಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಈಗಾಗಲೇ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಕುರಿತು ತನಿಖೆ ಕೈಗೊಂಡು ಬಳಿಕ ತಪ್ಪಿತಸ್ಥರ ಮೇಲೆ ಮುಖ್ಯಕ್ರಮ ಜರುಗಿಸಲಾಗುವುದು. ಕೂಡಲೇ ಅಡುಗೆ ಸಹಾಯಕರನ್ನು ಬದಲಾಯಿಸಲಾಗುವುದು. ಮತ್ತು ಮುಖ್ಯ ಶಿಕ್ಷಕ ಪಿ.ಬಿ. ಪಾಟೀಲರನ್ನು ಬೇರೆಡೆ ವರ್ಗಾವಣೆ ಮಾಡಲಾಗುವುದು ಎಂದರು.
ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ: ಯಾವುದೇ ಕಾರಣಕ್ಕೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಮುಂಜಾಗ್ರತೆ ವಹಿಸಲು ಇಂದಿನಿಂದ 10 ದಿನಗಳ ಮಟ್ಟಿಗೆ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗುವುದು. ಆಸ್ಪತ್ರೆಯಲ್ಲಿ ಓರ್ವ ವೈದ್ಯಾಧಿಕಾರಿ 6 ವೈದ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು. ಪ್ರತಿ ಮಕ್ಕಳಿಗೂ ಪ್ರತಿದಿನ ಆರೋಗ್ಯ ತಪಾಸಣೆ ನಡೆಸಲಾಗುವುದು. ಅಗತ್ಯವಿರುವ ಔಷಧಿ ಉಪಚಾರದ ವ್ಯವಸ್ಥೆ ಒದಗಿಸಲಾಗುವುದು ಎಂದರು.
ಪ್ರತಿದಿನ 500 ಲೀ. ಶುದ್ಧ ನೀರು: ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ 500 ಲೀಟರ್ ಶುದ್ಧ ನೀರು ಕೊಡುವ ವ್ಯವಸ್ಥೆಯನ್ನು ಗ್ರಾಪಂ ವತಿಯಿಂದ ಕಲ್ಪಿಸಲಾಗುವುದು ಎಂದು ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಬಿಇಒ ಡಿ.ಐ. ಅಸುಂಡಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ಬಿ. ಪಾಟೀಲ, ನರೇಗಲ್ಲ ಪಿಎಸ್‌ಐ, ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪಾಲಕರು, ಗ್ರಾಮದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement