ಗದಗದಲ್ಲಿ 12 ಸಿಸಿ ಕ್ಯಾಮೆರಾ ಅಳವಡಿಕೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 4
ದಿನೇ ದಿನೇ ಅಭಿವೃದ್ಧಿಯ ದಾಫುಗಾಲಿಡುತ್ತಿರುವ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥತೆ ಕಾಪಾಡಲು ಗದಗ ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು ಹಾಗೂ ನಗರಕ್ಕೆ ಹೊಸ ಆಯಾಮವನ್ನು ನೀಡುವ ಉದ್ದೇಶದಿಂದ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ 12 ವೃತ್ತಗಳಲ್ಲಿ ಹೊಸ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಹೊಸ ತಂತ್ರಜ್ಞಾನವಾದ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದರು. ಸ್ಥಳೀಯ ಸಂಸ್ಥೆ, ಜಿಲ್ಲಾಡಳಿತದ ಸಹಕಾರದಲ್ಲಿ ಸುಮಾರು ರು. 10 ಲಕ್ಷ ವೆಚ್ಚದಲ್ಲಿ ನಗರದ ಪ್ರಮುಖ 12 ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಈ ತಂತ್ರಜ್ಞಾನದಿಂದ ಕಾನೂನು ಸುವ್ಯವಸ್ಥೆ ಸಂಚಾರ ನಿಯಂತ್ರಣ, ಅಪರಾಧ ತಡೆ ಮತ್ತು ಪತ್ತೆ ಕಾರ್ಯಕ್ಕೆ ಸಹಕಾರಿಯಾಗಲಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ, ಮುಳಗುಂದ ನಾಕಾ, ಲದ್ವಾ ವೃತ್ತ(ಕೆ.ಎಂ. ಕಾರ್ಯಪ್ಪ ವೃತ್ತ), ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಜಾಮೀಯಾ ಮಸ್ಜೀದ್, ಟಾಂಗಾಕೂಟ, ಮಾಳಶೆಟ್ಟಿ ವೃತ್ತ, ಬೆಟಗೇರಿ ಬಜಾರ, ಹೊಸಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದ ಬಳಿ ಈ ಕ್ಯಾಮೆರಾ ಅಳವಡಿಸಲಾಗಿದೆ. ಅವಳಿ ನಗರ ವ್ಯಾಪ್ತಿಯ 15 ಕಿಮೀ ಪರಿಮಿತಿಯಲ್ಲಿ ಈಗಾಗಲೇ ಅಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದ್ದು, 2 ಮೆಗಾಫಿಕ್ಸಲ್ ಡಿಜಿಟಲ್ ತಂತ್ರಜ್ಞಾನ ಬಳಸಲಾಗಿದೆ. ಜಿಲ್ಲಾ ಪೊಲೀಸ್ ಕಾರ್ಯಾಲಯ ಸೇರಿದಂತೆ ಗುರುತಿಸಲ್ಪಟ್ಟ ಕೆಲವು ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾದ ಟಿವಿಗಳ ಮೂಲಕ ನಗರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಕಾರ್ಯಕ್ಕೆ ಪ್ರಾಮುಖ್ಯ ನೀಡಲಾಗಿದೆ. ಇಲಾಖೆಯ ಉತ್ತಮ ಕಾರ್ಯಕ್ಕೆ ಈ ತಂತ್ರಜ್ಞಾನ ಮಹತ್ತರ ಸಾಧನೆಗೆ ಸಹಕಾರಿಯಾಗಲಿದೆ. ಇದರೊಟ್ಟಿಗೆ ಇದನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ಇನ್ನು 12 ಪ್ರದೇಶಗಳನ್ನು ಈ ಕಾರ್ಯಕ್ಕೆ ಸ್ಥಳ ಗುರುತಿಸಲಾಗಿದ್ದು, ಬರುವ ದಿನಗಳಲ್ಲಿ ಹುಬ್ಬಳ್ಳಿಯ ಟ್ರಿನಿಟಿ ಟೆಕ್ನಾಲಜಿಸ್ ಸಲೂಷನ್ಸ್ ಇವರ ನೇತೃತ್ವದಲ್ಲಿ ಅಳವಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ನೂತನವಾಗಿ ಅಳವಡಿಸಲಾದ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು. ಟ್ರಿನಿಟಿ ಟೆಕ್ನಾಲಜಿಸ್‌ನ ವ್ಯವಸ್ಥಾಪಕ ರಜನೀಶ ಗುಂಜಳ ಅಳವಡಿಸಲಾದ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ನಗರಸಭೆ ಸದಸ್ಯರು ಮುಂತಾದವರು ಇದ್ದರು. ಡಿವೈಎಸ್‌ಪಿ ವಿಜಯ ಡಂಬಳ ಸ್ವಾಗತಿಸಿ, ವಂದಿಸಿದರು.