ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೆಗ್ಗೋಡಿನ ಚರಕ ಸಂಸ್ಥೆಯಿಂದ ಗಜೇಂದ್ರಗಡದಲ್ಲಿ ಕೈಮಗ್ಗ ಕೇಂದ್ರ

Mainashree
Updated On : 5 Mar 2014, 10:39 am

ಗಜೇಂದ್ರಗಡ: ಹೆಗ್ಗೋಡಿನ ಚರಕ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ನೈಸರ್ಗಿಕ ಬಣ್ಣದಿಂದ ತಯಾರಾಗುವ ಬೃಹತ್ ಕೈಮಗ್ಗ ಕೇಂದ್ರ ಸ್ಥಾಪನೆಗೊಳ್ಳಲಿದೆ ಎಂದು ಅಖಿಲ ಭಾರತ ಕೈ ಮಗ್ಗ ನೇಕಾರರ ಒಕ್ಕೂಟದ ಸಂಚಾಲಕ ಹಾಗೂ ದೇಶಿ ಸಂಸ್ಥೆಯ ನಿರ್ದೇಶಕ ಎಸ್.ಸಿ. ದೇವರಮನಿ ಹೇಳಿದರು.
ಸ್ಥಳೀಯ ಶ್ರೀ ಆದಿಶಕ್ತಿ ಕೈ ಮಗ್ಗ ನೇಕಾರರ ಸಂಘ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳ ಮದ್ಯೆ ಭಾಗದ ಗಜೇಂದ್ರಗಡ ಪಟ್ಟಣ ನೇಕಾರಿಕೆಯ ತವರೂರು ಎನಿಸಿದೆ. ಜತೆಗೆ ಇಲ್ಲಿ ತಯಾರಾಗುವ ಬಟ್ಟೆಗಳು ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿವೆ. ನೇಕಾರಿಕೆಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳ ಸ್ಥಿತಿ ದುಸ್ತರವಾಗಿದೆ. ಸರ್ಕಾರ ನೇಕಾರರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಹಾಕಿವೆ ಎಂದು ದೂರಿದರು. ಕೈಮಗ್ಗ ನೇಕಾರರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿಸುವ ಸದುದ್ದೇಶದಿಂದ ಹೆಗ್ಗೋಡಿನಲ್ಲಿ ರಂಗ ಕರ್ಮಿ ಪ್ರಸನ್ನರವರು ಸ್ಥಾಪಿಸಿರುವ ಚರಕ ಕೈಮಗ್ಗ ಸಂಸ್ಥೆ ಸಾವಿರಾರು ನೇಕಾರ ಕುಟುಂಬಗಳಿಗೆ ಆಧಾರವಾಗಿವೆ. ಈ ದೆಸೆಯಲ್ಲಿ ಸರ್ಕಾರದ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಚರಕ ಸಂಸ್ಥೆ ವತಿಯಿಂದ ಗಜೇಂದ್ರಗಡ ಪಟ್ಟಣದಲ್ಲಿ ದೊಡ್ಡ ಸಾಮೂಹಿಕ ಕೈಮಗ್ಗ ನೇಕಾರಿಕಾ ಸಂಸ್ಥೆ ಸ್ಥಾಪಿಸಿ ಆ ಮೂಲಕ ಕನಿಷ್ಠ ಸಾವಿರಾರು ಕೈಮಗ್ಗ ನೇಕಾರರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಇನ್ನೊಂದು ವಾರದಲ್ಲಿ ಚರಕ ಸಂಸ್ಥೆ ಮುಖ್ಯಸ್ಥ ಪ್ರಸನ್ನರವರು ಪಟ್ಟಣಕ್ಕೆ ಭೇಟಿ ನೀಡಿ ಕೈಮಗ್ಗ ನೇಕಾರರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ರಾಜ್ಯದಲ್ಲಿ ನೈಸರ್ಗಿಕ ಬಣ್ಣಗಳಿಂದ ತಯಾರಾಗುವ ಬಟ್ಟೆಗಳಿಗೆ ಕೇವಲ 13 ಮಳಿಗೆಗಳಿಂದ ಮಾರ್ಚ್ ತಿಂಗಳಾಂತ್ಯದಲ್ಲಿ ಸುಮಾರು ರು. 5 ಕೋಟಿಗಿಂತಟಿಡಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗಜೇಂದ್ರಗಡದಲ್ಲಿ ನೈಸರ್ಗಿಕ ಕೈಮಗ್ಗ ಕೇಂದ್ರವನ್ನು ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಜತೆಗೆ ದೇಶಿ ಸಂಸ್ಥೆಯ ಸಂಸ್ಥಾಪಕ ಪ್ರಸನ್ನರವರು ಗಜೇಂದ್ರಗಡದಿಂದ ಬನಶಂಕರಿ ವರೆಗೆ ಕೈಗೊಂಡ ಪಾದಯಾತ್ರೆಗೆ ಸಿಕ್ಕ ಅಭೂತಪೂರ್ವ ಬೆಂಬಲದ ಪ್ರಯುಕ್ತ ಕೈಮಗ್ಗ ನೇಕಾರಿಕೆ ಉಳಿಸಿ ಬೆಳೆಸಬೇಕೆನ್ನುವ ಇಚ್ಛಾಶಕ್ತಿ ಸಂಸ್ಥೆ ಹೊಂದಿದೆ ಎಂದರು. ವಿಶ್ವನಾಥ ಕೆಂಚಿ, ಪಾಂಡುರಂಗ ಶಿಲವೇರಿ, ಎಂ.ಎಂ. ಕುಲಕರ್ಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement