ಕವಿವಿ ಪರೀಕ್ಷಾ ಶುಲ್ಕ ಏರಿಕೆ: ಎಸ್ಎಫ್ಐ ಖಂಡನೆ
ಗದಗ: ರಾಜ್ಯ ಸರ್ಕಾರ ಪದೇ ಪದೇ ವಿದ್ಯಾರ್ಥಿ ವಿರೋಧಿ ನೀತಿಗಳ ಜಾರಿಯಿಂದಾಗಿ ವಿದ್ಯಾರ್ಥಿ ಸಮುದಾಯ ಪ್ರತಿನಿತ್ಯ ಬೀದಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡುವುದಾಗಿ ಹೇಳಿತ್ತು. ಆದರೀಗ ರಾಜ್ಯ ಸರ್ಕಾರ ತನ್ನ ವರಸೆ ಬದಲಿಸಿ ಶುಲ್ಕ ವಿನಾಯಿತಿಗೆ ಅಂಕಗಳನ್ನು ಮಾನದಂಡವನ್ನಾಗಿ ಪರಿಗಣಿಸುವುದು ಎಂದು ಹೇಳಿ ಈಗ ಮತ್ತೆ ವಿದ್ಯಾರ್ಥಿಗಳಿಗೆ ಮೋಸ ಮಾಡಲು ಹೊರಟಿರುವುದು ಖಂಡನಾರ್ಹವಾಗಿದೆ ಎಂದು ಎಸ್ಎಫ್ಐ ರಾಜ್ಯ ಸಮಿತಿ ಉಪಾಧ್ಯಕ್ಷ ಬಸವರಾಜ ಪೂಜಾರ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಯನ್ನು ಮಾನದಂಡವನ್ನಾಗಿ ಪರಿಗಣಿಸಬೇಕೆ ಹೊರತು ಅಂಕಗಳನ್ನಲ್ಲ, ರಾಜ್ಯ ಸರ್ಕಾರ ಹೇಳಿರುವಂತೆ ಶುಲ್ಕ ವಿನಾಯಿತಿ ಹಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ತುಂಬಬೇಕು. ಆದರೆ, ಗ್ರಾಮೀಣ ಪ್ರದೇಶದ ಎಷ್ಟೋ ವಿದ್ಯಾರ್ಥಿಗಳಿಗೆ ಆನ್ಲೈನ್ ಪರಿಚಯವೆ ಇಲ್ಲದಿರುವಾಗ ಸರ್ಕಾರ ಆನ್ಲೈನ್ ಮೂಲಕ ಮಾತ್ರ ಅರ್ಜಿ ತುಂಬಬೇಕು ಎಂದು ಹೇಳಿರುವುದು ಅವೈಜ್ಞಾನಿಕ ಕ್ರಮ. ಮುಖ್ಯಮಂತ್ರಿಗಳು ರಾಜ್ಯದ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ಹೊರಟಿದ್ದಾರೆ. ಇಂತಹ ಬರಗಾಲ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಶಾಲಾ-ಕಾಲೇಜು ಶುಲ್ಕಗಳನ್ನು ಕಡಿತಗೊಳಿಸುವುದನ್ನು ಬಿಟ್ಟು ಈಗಿರುವ ಶುಲ್ಕಗಳ ಜತೆಗೆ ಮತ್ತಷ್ಟು ಶುಲ್ಕ ಏರಿಕೆ ಮಾಡಿ ವಿದ್ಯಾರ್ಥಿಗಳ ಮೇಲೆ ಹೊರೆ ಹೊರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಹಣವನ್ನು ವಾಪಸ್ ಮಾಡುವುದರ ಜತೆಗೆ ಯಾವುದೇ ರೀತಿಯ ಶುಲ್ಕಗಳನ್ನ ಹೆಚ್ಚಿಸಬಾರದು ಮತ್ತು ಕರ್ನಾಟಕ ವಿವಿ ವ್ಯಾಪ್ತಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕಗಳನ್ನು ಹೆಚ್ಚಿಸಲು ಕವಿವಿ ಹೊರಟಿದೆ. ವಿವಿ ಕುಲಪತಿಗಳು ಕೂಡಲೇ ತಮ್ಮ ನಿರ್ಧಾರ ಬದಲಿಸಿ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಶುಲ್ಕಗಳು ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಸ್ಎಫ್ಐ ಗದಗ ಜಿಲ್ಲಾ ಸಮಿತಿ ಮುಂದಿನ ದಿನಗಳಲ್ಲಿ ತೀವ್ರ ತೆರನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಸ್ಎಫ್ಐ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಚವ್ಹಾಣ, ಗದಗ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬೋಸ್ಲೆ, ಶಿವು ಪೂಜಾರ, ಶಿವಾಜಿ ಗಡ್ಡದ, ಸುರೇಶ, ಮಂಜು, ಕನಕಪ್ಪ, ಸಂತೋಷ ಯಮನೂರ, ಚೇತನ, ಮನೋಜ, ಮುತ್ತಪ್ಪ, ರವಿ, ಪ್ರಭು, ಬಸವರಾಜ ಮೋತಿಲಾಲ ಮುಂತಾದವರು ಆಗ್ರಹಿಸಿದ್ದಾರೆ.